ವಾಷಿಂಗ್ ಟನ್ : 'ಗುಜರಾತ್' ಮೂಲದ ವ್ಯಕ್ತಿಯೊಬ್ಬರ ಮೇಲೆ ಅಮೆರಿಕಾ ಪೊಲೀಸರು ಹಲ್ಲೆ ನಡೆಸಿದ್ದರು. ಈ ಬೆನ್ನಲ್ಲೇ ಇಂತದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ಅಮೆರಿಕಾದಲ್ಲಿರುವ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ.
ಸಿಖ್ ಸಮುದಾಯದ ಯುವಕನನ್ನು ಅಮೆರಿಕಾದ ವಿದ್ಯಾರ್ಥಿಗಳು ಭಯೋತ್ಪಾದಕ ಎಂದು ಭಾವಿಸಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆದಿರುವ ವಿಡಿಯೋ ದೃಶ್ಯಗಳು ಲಭ್ಯವಾಗಿದ್ದು, ಸ್ಕೂಲ್ ಬಸ್ ನಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ವರ್ಣಭೇದ ನೀತಿಯನ್ನು ಅನುಸರಿಸುತ್ತಿರುವ ಅಮೆರಿಕಾದ ವಿದ್ಯಾರ್ಥಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಬಾಲಕ ಹರ್ ಸುಖ್ ಸಿಂಗ್ ಕ್ಯಾಮರಾ ಎದುರು ಹೇಳಿದ್ದಾನೆ.
ಸ್ಕೂಲ್ ಬಸ್ ನಲ್ಲಿ ಆತನನ್ನು ಆಪ್ಘಾನ್ ಭಯೋತ್ಪಾದಕ ಎಂದು ಕರೆದು ಅಪಮಾನ ಮಾಡುತ್ತಿರುವುದು ವಿಡಿಯೋ ದೃಶ್ಯಗಳಲ್ಲಿ ಸ್ಪಷ್ಟವಾಗಿದೆ. ಅಮೆರಿಕಾದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯರ ಮೇಲೆ ದಾಳಿ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಗುಜರಾತ್ ಮೂಲದ ವ್ಯಕ್ತಿಯೊಬ್ಬರ ಮೇಲೆ ಅಮೆರಿಕಾ ಪೊಲೀಸರೇ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಶಾಲಾ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆದಿರುವ ವರದಿಯಾಗಿದೆ.