ಜಮ್ಮು : ಪ್ರತ್ಯೇಕ ಖಲೀಸ್ತಾನ್ ನಾಯಕ, ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯ ಫೋಸ್ಟರ್ ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡ ಸಿಖ್ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಮ್ಮು ಪಠಾಣ್ ಕೋಟ್ ಹೈವೇಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಜೂ.4ರಂದು ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದ. ಜಮ್ಮು ನಗರ ಸೇರಿದಂತೆ ಹಲವೆಡೆ ಉದ್ವಿಗ್ನ ವಾತಾವರಣವಿದ್ದು, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ನೆ ಜಾರಿಗೊಳಿಸಲಾಗಿದೆ.
ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಿರಲು ಮುಂಜಾಗ್ರತಾ ಕ್ರಮವಾಗಿ ಶನಿವಾರದವರೆಗೆ ಜಮ್ಮುವಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಖಲೀಸ್ತಾನ್ ಚಳವಳಿ ಸಂಸ್ಥಾಪಕ, ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯ ಫೋಸ್ಟರ್ ಅನ್ನು ಕಿತ್ತುಹಾಕಿದ್ದಕ್ಕೆ ಆಕ್ರೋಶಗೊಂಡ ಸಿಖ್ ಸಮುದಾಯದ ಯುವಕರು ದೊಣ್ಣೆ, ಚೂರಿ(ಕಿರ್ಪಾಣ್) ಹಿಡಿದುಕೊಂಡು ಪ್ರತಿಭಟನೆಗೆ ಇಳಿದಿದ್ದರು. ಇದು ಹಿಂಸಾಚಾರಕ್ಕೆ ತಿರುಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಕೆಲವು ಯುವಕರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.