ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ನಿರ್ಧಾರದ ಬೆನ್ನಲ್ಲೇ ಪಿಡಿಪಿ ಕೇಂದ್ರದಲ್ಲೂ ಎನ್.ಡಿ.ಎ ಮೈತ್ರಿಕೂಟ ಸೇರುವ ಸಾಧ್ಯತೆ ಇದೆ.
ಈ ಬಗ್ಗೆ ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ, ಎನ್.ಡಿ.ಎ ಮೈತ್ರಿಕೂಟ ಸೇರುವ ಪಿಡಿಪಿ ಪಕ್ಷದ ಪ್ರಸ್ತಾವನೆಗೆ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬೆಳವಣಿಗೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಬಿಜೆಪಿ ಮುಖಂಡ ನಿರ್ಮಲ್ ಸಿಂಗ್, ಪಿಡಿಪಿ ಎನ್.ಡಿ.ಎ ಮೈತ್ರಿಕೂಟ ಸೇರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಂಪೂರ್ಣ ಮಾಹಿತಿ ಇದ್ದು ಅವರನ್ನೇ ಕೇಳಬೇಕು ಎಂದಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದನ್ನು ಖಚಿತಪಡಿಸಿರುವ ನಿರ್ಮಲ್ ಸಿಂಗ್, ಸರ್ಕಾರ ರಚನೆ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ ಎಂದು ಹೇಳಿದ್ದಾರೆ.
ಇನ್ನು ಮೋದಿ ಸರ್ಕಾರ ಸೇರುವ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿರುವ ಪಿಡಿಪಿ ಮುಖಂಡರು ಯಾವುದೇ ಕಾರಣಕ್ಕೂ ಮೋದಿ ಸರ್ಕಾರ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಪಿಡಿಪಿಯ ಇಬ್ಬರು ಸಂಸದರು ಮೋದಿ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಎನ್.ಡಿ.ಎ ಮೈತ್ರಿಕೂಟ ಸೇರಲು ಪಿಡಿಪಿಯಲ್ಲೇ ಪರ ವಿರೋಧ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿಬರುತ್ತಿದೆ.