ನವದೆಹಲಿ : ಪಾಕಿಸ್ತಾನದಲ್ಲಿ 6 ನ್ಯೂಕ್ಲಿಯರ್ ರಿಯಾಕ್ಟರ್ ಗಳನ್ನು ನಿರ್ಮಿಸುತ್ತಿರುವುದಾಗಿ ಪಾಕಿಸ್ತಾನದ ಪರಮಾಪ್ತ ಮಿತ್ರ ಚೀನಾ ಸ್ಪಷ್ಟಪಡಿಸಿದೆ.
ಚೀನಾದ ಎನ್.ಡಿ.ಆರ್.ಸಿಯ ಮುಖ್ಯಸ್ಥರು ಚೀನಾ ಪಾಕಿಸ್ತಾನಕ್ಕೆ ಪರಮಾಣು ಸಹಕಾರ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಪಾಕಿಸ್ತಾನ ಹಾಗೂ ಚೀನಾ ನಡುವಿನ ಪರಮಾಣು ಒಪ್ಪಂದಕ್ಕೆ ನ್ಯೂಕ್ಲಿಯರ್ ಸಪ್ಲೆಯರ್ಸ್ ಗ್ರೂಪ್( ಎನ್.ಎಸ್.ಜಿ) ನಿಂದ ತೀವ್ರ ವಿರೋಧ ವ್ಯಕ್ತವಾದರೂ ಸಹ ಉಭಯ ರಾಷ್ಟ್ರಗಳ ನಡುವಿನ ಪರಮಾಣು ಯೋಜನೆಗಳು ಮುಂದುವರೆಯಲಿದೆ ಎಂದು ಚೀನಾ ತಿಳಿಸಿದೆ.
ಪರಮಾಣು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚೀನಾದ ಎನ್.ಡಿ.ಆರ್.ಸಿ ನೂತನ ರಫ್ತು ಬೆಂಬಲ ಆರ್ಥಿಕ ನೀತಿಗಳಿಗೆ ಹೊಸ ಮಾರ್ಗಸೂಚಿ ರೂಪಿಸುತ್ತಿದೆ. ಹೊಸ ಮಾರ್ಗಸೂಚಿಗಳಲ್ಲಿ ರೈಲ್ವೇ ರಫ್ತು ಮಾಡುವುದೂ ಸಹ ಒಂದು ಅಂಶವಾಗಲಿದೆ ಎಂದು ಚೀನಾ ತಿಳಿಸಿದೆ.
ಪಾಕಿಸ್ತಾನದಲ್ಲಿ ಚೀನಾ ನಿರ್ಮಿಸುತ್ತಿರುವ 6 ನ್ಯೂಕ್ಲಿಯರ್ ರಿಯಾಕ್ಟರ್ ಗಳ ಸಾಮರ್ಥ್ಯ 3.4 ಮಿಲಿಯನ್ ಕಿಲೋವ್ಯಾಟ್ ನದ್ದಾಗಿದೆ. ಎನ್.ಪಿ.ಟಿ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟ್ರಗಳಿಗೆ ನ್ಯೂಕ್ಲಿಯರ್ ತಂತ್ರಜ್ನಾನ ಸರಬರಾಜು ಮಾಡುವುದಕ್ಕೆ ನಿರ್ಬಂಧವಿರುವ ಕಾರಣ ಪಾಕಿಸ್ತಾನದೊಂದಿಗೆ ಚೀನಾದ ಅಣು ಒಪ್ಪಂದಕ್ಕೆ ಎನ್.ಎಸ್.ಜಿ ಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಎನ್.ಎಸ್.ಜಿಗೂ ಸೆಡ್ಡು ಹೊಡೆದಿರುವ ಚೀನಾ ಎಷ್ಟೇ ವಿರೋಧ ವ್ಯಕ್ತವಾದರೂ ಪಾಕಿಸ್ತಾನದೊಂದಿಗಿನ ಯೋಜನೆಗಳು ಮುಂದುವರೆಯಲಿವೆ ಎಂದು ಹೇಳಿದೆ.