ನವದೆಹಲಿ : 'ಶ್ರೀಲಂಕಾ'ದಲ್ಲಿ ಮೈತ್ರಿಪಾಲ ಸಿರಿಸೇನಾ ನೇತೃತ್ವದ ನೂತನ ಸರ್ಕಾರ ರಚನೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾರ್ಚ್ ನಲ್ಲಿ ಮೋದಿ ಶ್ರೀಲಂಕಾ ಪ್ರವಾಸ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ. ಕಳೆದ 25 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಶ್ರೀಲಂಕಾಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆ ಮಹತ್ವ ಪಡೆದುಕೊಂಡಿದೆ.
ಫೆ.16ರಂದು ಶ್ರೀಲಂಕಾ ನೂತನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಭಾರತಕ್ಕೆ ಆಗಮಿಸಲಿದ್ದಾರೆ. ಅಧ್ಯಕ್ಷರಾದ ಬಳಿಕ ಸಿರಿಸೇನಾ ಪ್ರಥಮ ವಿದೇಶ ಪ್ರವಾಸಕ್ಕೆ ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಶ್ರೀಲಂಕಾ ಸರ್ಕಾರ ಭಾರತದೊಂದಿಗೆ ಬಾಂಧವ್ಯ ವೃದ್ಧಿಗೆ ಸಿದ್ಧವಿರುವ ಸೂಚನೆ ರವಾನಿಸಿದೆ.
ಶ್ರೀಲಂಕಾ ಅಧ್ಯಕ್ಷರ ಭೇಟಿಯ ಒಂದು ತಿಂಗಳ ನಂತರ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆ. 1987ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಈ ಹಿಂದಿನ ಶ್ರೀಲಂಕಾ-ಭಾರತದ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ, ತಮ್ಮ ಶ್ರೀಲಂಕಾ ಪ್ರವಾಸದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿರುವ ಜಫ್ನಾ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.