ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಇನ್ನು 10 ದಿನದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ.
ಕಳೆದ ಕೆಲ ದಿನಗಳಿಂದ ಉಭಯ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ. ವಿವಾದಾತ್ಮಕ ವಿಷಯಗಳಾದ ಸಂವಿಧಾನದ 370ನೇ ಪರಿಚ್ಛೇದ (ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಾಯ್ದೆ) ಮತ್ತು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಸೇರಿದಂತೆ ಹಲ ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು, ಉಭಯ ಪಕ್ಷಗಳಿಗೆ ಸಮ್ಮತವಾಗುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧಪಡಿಸಲಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕರ ಒಪ್ಪಿಗೆಗಾಗಿ ದೆಹಲಿಗೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಬಿಜೆಪಿ-ಪಿಡಿಪಿ ಇದೇ ಫೆ.7ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಪರಸ್ಪರರ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿವೆ.
ಮಾಧ್ಯಮ ವರದಿಗಳ ಪ್ರಕಾರ ಮುಖ್ಯಮಂತ್ರಿ ಹುದ್ದೆ ಪಿಡಿಪಿ ಪಾಲಾಗಲಿದ್ದು, ಉಪಮುಖ್ಯಮಂತ್ರಿ ಸ್ಥಾನ ಬಿಜೆಪಿಗೆ ಹೋಗಲಿದೆ. 87 ಸ್ಥಾನಗಳ ರಾಜ್ಯ ವಿಧಾನಸಭೆಯಲ್ಲಿ ಪಿಡಿಪಿ 28, ಬಿಜೆಪಿ 25, ನ್ಯಾಷನಲ್ ಕಾನ್ಫರೆನ್ಸ್ 15, ಕಾಂಗ್ರೆಸ್ 12 ಮತ್ತು ಇತರರು 7 ಸ್ಥಾನ ಹೊಂದಿದ್ದಾರೆ.