ನವದೆಹಲಿ : 'ಅಮೆರಿಕಾ' ಅಧ್ಯಕ್ಷ ಬರಾಕ್ ಒಬಾಮ ಅವರ 3 ದಿನಗಳ ಭಾರತ ಪ್ರವಾಸ ಅಂತ್ಯಗೊಂಡಿದೆ. ಬರಾಕ್ ಒಬಾಮ ಹಾಗೂ ಮಿಶೆಲ್ ಒಬಾಮ ಮಧ್ಯಾಹ್ನ ನವದೆಹಲಿಯ ಪಲಾಮ್ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾಗೆ ತೆರಳಿದರು.
ಒಬಾಮ ಅವರನ್ನು ಬೀಳ್ಕೊಡಲು ಪ್ರಧಾನಿ ನರೇಂದ್ರ ಮೋದಿ ಪಲಾಮ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ ಎಂಬ ವರದಿಗಳು ಪ್ರಕಟವಾಗಿತ್ತಾದರೂ ಪ್ರಧಾನಿ ಮೋದಿ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿರಲಿಲ್ಲ.
ಈ ಹಿಂದಿನ ವೇಳಾಪಟ್ಟಿಯ ಪ್ರಕಾರ ಬರಾಕ್ ಒಬಾಮ ತಾಜ್ ಮಹಲ್ ವೀಕ್ಷಣೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಸೌದಿ ಅರೇಬಿಯಾದ ರಾಜ ನಿಧನರಾಗಿರುವ ಹಿನ್ನೆಲೆಯಲ್ಲಿ ಬರಾಕ್ ಒಬಾಮ ತಮ್ಮ ತಾಜ್ ಮಹಲ್ ವೀಕ್ಷಣೆಯ ಕಾರ್ಯಕ್ರಮ ರದ್ದುಗೊಳಿಸಿ ಸೌದಿ ಅರೇಬಿಯಾಗೆ ತೆರಳಿದ್ದಾರೆ.
ವಿಮಾನ ಟೇಕ್ ಆಫ್ ಆಗುವುದಕ್ಕೂ ಮುನ್ನ ಟ್ವೀಟ್ ಮಾಡಿರುವ ಬರಾಕ್ ಒಬಾಮ, ಅವಿಸ್ಮರಣೀಯ ಆತಿಥ್ಯ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಜನತೆಗೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಬರಾಕ್ ಒಬಾಮ ಹಾಗೂ ಮಿಶೆಲ್ ಒಬಾಮ ಸೌದಿ ಅರೇಬಿಯಾದ ನೂತನ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ನೊಂದಿಗೆ ಮಾತುಕತೆ ನಡೆಸಲಿದ್ದಾರೆ.