ನವದೆಹಲಿ : 'ಬಿಜೆಪಿ'ಯಿಂದ ತಮಗೆ ಶೋಕಾಸ್ ನೊಟೀಸ್ ಬಂದಿರುವ ವಿಷಯವನ್ನು ಸಂಸದ ಸಾಕ್ಷಿ ಮಹಾರಾಜ್ ಅಲ್ಲಗಳೆದಿದ್ದಾರೆ.
ಶೋಕಾಸ್ ನೊಟೀಸ್ ಜಾರಿಯಾಗಿರುವುದರ ವರದಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾಕ್ಷಿ ಮಹಾರಾಜ್, ಮಾಧ್ಯಮಗಳಲ್ಲಿ ವರದಿಯಾಗಿರುವ ವಿಷಯ ಸುಳ್ಳು, ನನಗೆ ಪಕ್ಷದಿಂದ ಯಾವುದೇ ನೊಟೀಸ್ ಬಂದಿಲ್ಲ ಎಂದು ಹೇಳಿದ್ದಾರೆ.
ನಾನು ಬಿಜೆಪಿ ಪಕ್ಷದ ಕಾರ್ಯಕರ್ತ, ನನ್ನ ಹೇಳಿಕೆಗಳು ಪಕ್ಷಕ್ಕೆ ಸರಿಯಲ್ಲ ಎಂದೆನಿಸಿದರೆ ಖಂಡಿತವಾಗಿಯೂ ಬಿಜೆಪಿ ನನಗೆ ಶೋಕಾಸ್ ನೊಟೀಸ್ ನೀಡಲಿದೆ. ಆದರೆ ಈ ವರೆಗೂ ನನಗೆ ಪಕ್ಷ ಯಾವುದೇ ನೊಟೀಸ್ ಜಾರಿ ಮಾಡಿಲ್ಲ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಒಂದು ವೇಳೆ ಶೋಕಾಸ್ ನೊಟೀಸ್ ಬಂದರೆ ನಾನೇ ಮಾಧ್ಯಮಗಳಿಗೆ ಅದರ ಬಗ್ಗೆ ವಿವರಣೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಾಕ್ಷಿ ಮಹಾರಾಜ್ ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶೋಕಾಸ್ ನೊಟೀಸ್ ಜಾರಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.