ಇಸ್ಲಾಮಾಬಾದ್ : ಉಗ್ರರನ್ನು ಗಲ್ಲಿಗೇರಿಸುತ್ತಿರುವ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ತಾಲಿಬಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಷರೀಫ್ ನೇತೃತ್ವದ ಪಿಎಂಎಲ್-ಎನ್ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವಂತೆ ತೆಹ್ರೀಕ್ ಎ ತಾಲಿಬಾನ್ ಉಗ್ರ ಸಂಘಟನೆ ಮುಖಂಡ ಮುಲ್ಲಾ ಫಜಲುಲ್ಲಾ ಆದೇಶಿಸಿದ್ದಾನೆ.
ಈ ಸಂಬಂಧ ಆತ ಆಫ್ಘನ್ನ ರಹಸ್ಯ ಸ್ಥಳದಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋ ಕಳುಹಿಸಿಕೊಟ್ಟಿದ್ದಾನೆ. ನಮ್ಮ ಮೊದಲ ಶತ್ರು ಅವಾಮಿ ನ್ಯಾಷನಲ್ ಪಾರ್ಟಿ ಆಗಿತ್ತು. ಆದರೆ ಈಗ ಪಾಕ್ ಜಿಹಾದ್ನ ಭಾಗವಾಗಿರುವ ಮುಜಾಹಿದ್ದೀನ್ಗಳಿಗೆ ಆದೇಶ ನೀಡುತ್ತೇನೆ. ಪಿಎಂಎಲ್ಎನ್ ಇನ್ನು ನಮ್ಮ ಗುರಿ ಎಂದು ಫಜಲುಲ್ಲಾ ಹೇಳಿದ್ದಾನೆ.
ಫಜಲುಲ್ಲಾ ರೇಡಿಯೋ ಮುಲ್ಲ ಎಂದೇ ಕುಖ್ಯಾತಿ ಗಳಿಸಿದಾತ. ಒಂದು ಕಾಲದಲ್ಲಿ ಸ್ವಾತ್ ಕಣಿವೆಯ ತಾಲಿಬಾನ್ ನಾಯಕನಾಗಿದ್ದ ಮುಲ್ಲಾ, ನಂತರ 2013ರಲ್ಲಿ ಇಡೀ ಪಾಕಿಸ್ತಾನ ತಾಲಿಬಾನ್ ಸಂಘಟನೆಯ ಮುಖಂಡನಾದ. ಪೇಶಾವರ ಸೈನಿಕ ಶಾಲೆ ಮೇಲಿನ ದಾಳಿಯ ಸೂತ್ರದಾರ ಈತನೆಂದೇ ಹೇಳಲಾಗಿದೆ.