ನವದೆಹಲಿ : ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ದೆಹಲಿ ಪೊಲೀಸರು ನೋಟೀಸ್ ನೀಡಿದ್ದಾರೆ.
ಪ್ರಸ್ತುತ ಶಶಿ ತರೂರ್ ಕೇರಳದಲ್ಲಿದ್ದು, ಆದಷ್ಟು ಬೇಗ ತನಿಖೆಗೆ ಸಹಕರಿಸುವಂತೆ ನೋಟೀಸ್ ನೀಡಲಾಗಿದೆ. ಸೆಕ್ಷನ್ ಸಿಆರ್ಪಿಸಿ 160ರಡಿಯಲ್ಲಿ ತರೂರ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಜ.6ರಂದು ದೆಹಲಿ ಸರೋಜಿನಿ ನಗರ ಪೊಲೀಸರು ಸುನಂದಾ ಪುಷ್ಕರ್ ಅಸಹಜ ಸಾವು ಎಂದು ಹೇಳಿದ್ದು, ಪ್ರಕರಣವನ್ನು ಐಪಿಸಿ 302 ಅಡಿ ಕೊಲೆ ಎಂದು ದಾಖಲಿಸಿಕೊಂಡಿದ್ದರು.
ಎಫ್ಐಆರ್ನಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸದೇ, ಅಪರಿಚಿತ ವ್ಯಕ್ತಿಗಳಿಂದ ಕೊಲೆ ನಡೆದಿದೆ ಎಂದು ನಮೂದಿಸಿಕೊಂಡಿದ್ದರು. ದೆಹಲಿ ಉಪ ಪೊಲೀಸ್ ಆಯುಕ್ತ ಪ್ರೇಮನಾಥ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚಿಸಲಾಗಿದೆ.
ಕಳೆದ ಜ.17ರಂದು ದೆಹಲಿಯ ಪಂಚತಾರಾ ಹೋಟೆಲೊಂದರಲ್ಲಿ ಸುನಂದಾ ಪುಷ್ಕರ್ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಡಿ.29ರಂದು ನೀಡಿರುವ ಅಂತಿಮ ವೈದ್ಯಕೀಯ ವರದಿ ಸುನಂದಾ ವಿಷ ಪ್ರಾಶನದಿಂದ ಸಾವನ್ನಪ್ಪಿದ್ದು ಅಸಹಜ ಸಾವು ಎಂದು ಹೇಳಿತ್ತು.