ನವದೆಹಲಿ : ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಈಗಿನ್ನು ಪಾಕ್ ಪತ್ರಕರ್ತೆ ಮೆಹರ್ ತರಾರ್ ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ.
ಈ ಸಂಬಂಧ ಅಧಿಕೃತ ಪ್ರಕಟನೆಯೊಂದರಲ್ಲಿ ಸದ್ಯದಲ್ಲೇ ಹೊರಡಿಸಲಾಗುವುದು ಎಂದು ದೆಹಲಿ ಪೊಲೀಸ್ ಮುಖ್ಯಸ್ಥ ಬಿ ಎಸ್ ಬಸ್ಸಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
52 ವರ್ಷದ ಸುನಂದಾ ಪುಷ್ಕರ್ ಅವರು 2014ರ ಜನವರಿ 17ರಂದು ದಕ್ಷಿಣ ದಿಲ್ಲಿಯ ಪಂಚತಾರಾ ಹೊಟೇಲ್ ಒಂದರ ತಮ್ಮ ಕೋಣೆಯಲ್ಲಿ ಕೊಲೆಯಾಗಿದ್ದುದು ಪತ್ತೆಯಾಗಿತ್ತು. ಇದಕ್ಕೆ ಒಂದು ದಿನ ಮುನ್ನ ಆಕೆ ಪಾಕ್ ಪತ್ರಕರ್ತೆ ಮೆಹರ್ ತರಾರ್ ಅವರೊಂದಿಗೆ ತರೂರ್ ಜತೆಗಿನ ಅನೈತಿಕ ಸಂಬಂಧದ ಬಗ್ಗೆ ಟ್ವಿಟರ್ ನಲ್ಲಿ ಮಾತಿನ ಚಕಮಕಿ ನಡೆಸಿದ್ದರು.
ಪಾಕ್ ಪತ್ರಕರ್ತೆ ಮೆಹರ್ ತರಾರ್ ಅವರನ್ನು ಪ್ರಶ್ನಿಸಿದ ಬಳಿಕ ಅಗತ್ಯ ಕಂಡುಬಂದಲ್ಲಿ ಮತ್ತು ಶಶಿ ತರೂರ್ ಅವರನ್ನು ಪ್ರಶ್ನಿಸಲಾಗುವುದು ಎಂದು ದಿಲ್ಲಿ ಪೊಲೀಸ್ ಮುಖ್ಯಸ್ಥ ಬಿ ಎಸ್ ಬಸ್ಸಿ ಹೇಳಿದ್ದಾರೆ.
ಸುನಂದಾ ಪುಷ್ಕರ್ ಅವರ ಮೃತ ದೇಹದ ಅಂಗಾಂಶಗಳ ಪರೀಕ್ಷಾ ವರದಿಯನ್ನು ಆದಷ್ಟು ಬೇಗನೆ ಕಳುಹಿಸಿಕೊಡುವಂತೆ ಅಮೆರಿಕದ ಎಫ್ ಬಿ ಐ ಅನ್ನು ನಾವು ಕೇಳಿಕೊಂಡಿದ್ದೇವೆ ಎಂದು ಬಸ್ಸಿ ಹೇಳಿದರು.
ಪುಷ್ಕರ್ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಎಸ್ ಐ ಟಿ, ಈಗಾಗಲೇ ಕನಿಷ್ಠ 16 ಮಂದಿಯನ್ನು ಈ ತನಕ ಪ್ರಶ್ನಿಸಿದೆ. ಇವರಲ್ಲಿ ಶಶಿ ತರೂರ್, ಅವರ ಸಿಬಂದಿ ವರ್ಗದವರು, ನಿಕಟ ಸ್ನೇಹಿತರು ಹಾಗೂ ಲೀಲಾ ಪ್ಯಾಲೇಸ್ ಹೊಟೇಲಿನ ಸಿಬಂದಿ ಸೇರಿದ್ದಾರೆ.