ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ 'ಯು-ಟರ್ನ್ ಸರ್ಕಾರ್' ಎಂಬ ಹಣೆಪಟ್ಟಿ ನೀಡಿ ಟ್ವೀಟರ್ನಲ್ಲಿ ಆಂದೋಲನ ಆರಂಭಿಸಿದ್ದ ಕಾಂಗ್ರೆಸ್, ಈಗ ಈ ಕುರಿತ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದೆ.
30 ಪುಟಗಳ ಈ ಪುಸ್ತಕದಲ್ಲಿ 'ಛೇ ಮಹೀನೇ ಪಾರ್, ಯು-ಟರ್ನ್ ಸರ್ಕಾರ್' (6 ತಿಂಗಳು ಕಳೆದವು, ತಿರುವು ಮುರುವು ನಿಲುವುಗಳ ಸರ್ಕಾರ), ಕಪ್ಪುಹಣ ವಾಪಸು ತರುವ ವಾಗ್ಧಾನ ಮಾಡಿದ್ದ ಮೋದಿ ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣ ಉಲ್ಟಾ ಹೊಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಕೈಪಿಡಿ ಬಿಡುಗಡೆ ಮಾಡಿದರು.
ಯುಪಿಎ ಯೋಜನೆಗಳನ್ನು ವಿಪಕ್ಷದಲ್ಲಿದ್ದಾಗ ಟೀಕಿಸುತ್ತಿದ್ದ ಬಿಜೆಪಿ ಈಗ ಅದೇ ಯೋಜನೆಗಳ ಹೆಸರು ಬದಲಿಸಿ ಮರುಜಾರಿ ಮಾಡುವ ನಾಟಕವಾಡುತ್ತಿದೆ. ಈ ಪುಸ್ತಿಕೆಯ ಮೂಲಕ ಮೋದಿ ಅವರ ನಿಜ ಬಣ್ಣ ಬಯಲು ಮಾಡುತ್ತೇವೆ ಎಂದು ಮಾಕನ್ ಲೇವಡಿ ಮಾಡಿದರು.
ಕಾಂಗ್ರೆಸ್ ನ ಐದು ಪ್ರಮುಖ ಆರೋಪಗಳು-
100 ದಿನದಲ್ಲಿ ವಿದೇಶದಿಂದ ಕಪ್ಪುಹಣ ತಂದಿಲ್ಲ
ಆಧಾರ್ಗೆ ಅಂದು ವಿರೋಧ, ಈಗ ಬೆಂಬಲ
ಕಾಶ್ಮೀರ ವಿಶೇಷ ಸ್ಥಾನಮಾನ ಬಗ್ಗೆ ನಿಲುವು ಬದಲು
ನೇತಾಜಿ ಕಣ್ಮರೆ ವಿವರ ಕೇಳಿದ್ದ ಬಿಜೆಪಿ ಈಗ ಉಲ್ಟಾ
ವಿಮಾ ಮಸೂದೆಗೆ ಅಂದು ವಿರೋಧ, ಈಗ ಬೆಂಬಲ