ನವದೆಹಲಿ : ನ.26ರಿಂದ 28ರವರೆಗೆ ನೇಪಾಳದಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ರಸ್ತೆ ಮೂಲಕವೇ ನೇಪಾಳಕ್ಕೆ ತೆರಳಲಿರುವ ಪ್ರಧಾನಿ ಮೋದಿ, ಸಾರ್ಕ್ ದೇಶಗಳ ನಾಯಕರನ್ನು ಭೇಟಿ ಮಾಡಲಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಸಹ ನೇಪಾಳಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನ.27ರಂದು ಉಭಯ ನಾಯಕರು ಭೇಟಿ ಮಾಡುವ ಸಾಧ್ಯತೆ ಇದೆ. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಪಾಕಿಸ್ತಾನ, ಕಾಶ್ಮೀರ ಪ್ರತ್ಯೇಕವಾದಿಗಳಿಗೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಪಾಕ್ ನೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿತ್ತು. ಅಲ್ಲದೇ ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳೊಂದಿಗೆ ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಿತ್ತು. ಕಾಶ್ಮೀರ ವಿಷಯವನ್ನು ಭಾರತದೊಂದಿಗೆ ಪ್ರಸ್ತಾಪಿಸಬೇಕೆಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪಾಕ್ ಸರ್ಕಾರ ಮನವಿ ಮಾಡಿತ್ತು.ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಪಾಕ್ ಪ್ರಧಾನಿ-ಮೋದಿ ನಡುವಿನ ಮಾತುಕತೆ ನಡೆಯಲು ವೇದಿಕೆ ಸಿದ್ಧವಾಗಿರುವುದು ಕುತೂಹಲ ಮೂಡಿಸಿದೆ.