ಬೆಂಗಳೂರು : 'ಕಿಸ್ ಆಫ್ ಲವ್' ಆಂಧೋಲನದಿಂದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನ.19ರಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಘಟಕದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಡ್ ರೂಂ ನಲ್ಲಿ ನಡೆಯುವ ಕೆಲಸ ಬೀದಿಯಲ್ಲಿ ನಡೆಸುವುದು ನೈತಿಕತೆ ಅಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕಿಸ್ ಆಫ್ ವಲ್ ಆಂಧೋಲನಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಬಿಜೆಪಿ ಎಂದಿಗೂ ನೈತಿಕ ಪೊಲೀಸ್ ಗಿರಿಯನ್ನು ಉತ್ತೇಜಿಸುವುದಿಲ್ಲ ಹಾಗೆಯೇ ಕಿಸ್ ಆಫ್ ಲವ್ ಆಂಧೋಲನವನ್ನೂ ವಿರೋಧಿಸುತ್ತದೆ. ಇಂತಹ ಕಾರ್ಯಕ್ರಮಗಳಿಂದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗಲಿದ್ದು ಎಲ್ಲಾ ತಂದೆ ತಾಯಿಯರೂ ಈ ಕಾರ್ಯಕ್ರಮವನ್ನು ವಿರೋಧಿಸಬೇಕೆಂದು ಕರೆ ನೀಡಿದ್ದಾರೆ.
ರಾಜ್ಯದಲ್ಲಿ ನಂದಿತಾ ಪ್ರಕರಣದ ರೀತಿಯ ಘಟನೆಗಳು ಮರುಕಳಿಸುತ್ತಿದ್ದು ಭದ್ರಾವತಿ, ಹೊಸನಗರದಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಸರ್ಕಾರ ಇಂತಹ ಪ್ರಕರಣಗಳ ಬಗ್ಗೆ ಸೂಕ್ತ ಗಮನ ಹರಿಸದೇ ಅತ್ಯಾರಿಗಳಿಗೆ ರಕ್ಷಣೆ ನೀಡುತ್ತಿದೆ ಎಂಬ ಸಂದೇಶ ರವಾನೆಯಾಗಿದೆ. ಇಂತಹ ಕೆಟ್ಟ ಸರ್ಕಾರವನ್ನು ಎಲ್ಲಿಯೂ ನೋಡಿಲ್ಲ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.