ವಾಷಿಂಗ್ ಟನ್ : 'ನರೇಂದ್ರ ಮೋದಿ'-ಅಮಿತ್ ಶಾ, ರಾಜಕೀಯ ತಂತ್ರಗಾರಿಕೆಯಲ್ಲಿ ಯಶಸ್ವಿ ಜೋಡಿ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಈ ಮಾತನ್ನು ಅಮೆರಿಕಾ ಕೂಡ ಒಪ್ಪಿ ವಿಶ್ವದ 100 ಚಿಂತಕರ ಪಟ್ಟಿಯಲ್ಲಿ ಅಮಿತ್ ಶಾ-ಮೋದಿ ಅವರಿಗೂ ಸ್ಥಾನ ನೀಡಿದೆ.
ಅಮೆರಿಕಾದ ಫಾರಿನ್ ಪಾಲಿಸಿ ನಿಯತಕಾಲಿಕ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅವರ ಜೋಡಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ಣಯ ಕೈಗೊಳ್ಳುವ ವಿಶ್ವದ 100 ಚಿಂತಕರ ಪಟ್ಟಿಯಲ್ಲಿ ಸೇರಿಸಿದೆ. ನಿಯತಕಾಲಿಕ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಗಿಂತಲೂ ಮೇಲ್ಪಂಕ್ತಿಯಲ್ಲಿದ್ದು ನಿರ್ಧಾರ ಕೈಗೊಳ್ಳುವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫಾರಿನ್ ಪಾಲಿಸಿ ನಿಯತಕಾಲಿಕ ಪ್ರಧಾನಿ ಮೋದಿ ಅವರನ್ನು ಅತ್ಯಂತ ಪ್ರಭಾವಿ ಮತ್ತು ವ್ಯಾಪಾರ ಸ್ನೇಹಿ ವ್ಯಕ್ತಿತ್ವದವರೆಂದು ಬಣ್ಣಿಸಿರುವುದು ವಿಶೇಷ.
ಇದೇ ಪತ್ರಿಕೆಯಲ್ಲಿ 2014ರ ಚುನಾವಣೆಯನ್ನು ವಿಶ್ಲೇಷಿಸಲಾಗಿದ್ದು, ಪ್ರಧಾನಿ ಮೋದಿ ಚುನಾವಣಾ ಸಂದರ್ಭದಲ್ಲಿ 3D ಹೊಲೊಗ್ರಾಫಿಕ್ ಪ್ರಕ್ಷೇಪಗಳು ಸೇರಿದಂತೆ ಆಧುನಿಕ ತಂತ್ರಜ್ನಾನದ ಮೂಲಕ ಇಡಿ ದೇಶವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದೆ.
ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಅಮಿತ್ ಶಾ ಅವರನ್ನೂ ಹೊಗಳಿರುವ ಪತ್ರಿಕೆ ಅಮಿತ್ ಶಾ ಅವರ ಚತುರತೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಒಟ್ಟಾರೆ ಮೋದಿ-ಅಮಿತ್ ಶಾ ಜೋಡಿ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.