ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ದಲ್ಲಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿಗೆ ಮತ ನೀಡಿದರೆ ರಾಜ್ಯಕ್ಕೆ ಹಿಂದೂ ಮುಖ್ಯಮಂತ್ರಿ ಕೈಗೆ ಅಧಿಕಾರ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ನೀಡಬಾರದು ಎಂದು ಪಿಡಿಪಿ ಮುಖ್ಯಸ್ಥ ಪೀರ್ ಮನ್ಸೂರ್ ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಪಿಡಿಪಿ ಮುಖಂಡ, ಕೆಲವು ಪ್ರಾದೇಶಿಕ ಪಕ್ಷಗಳೂ ಕೋಮುವಾದಿ ಪಕ್ಷಗಳೊಂದಿಗೆ ಸೇರಿ ಹಿಂದೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ತಂತ್ರ ರೂಪಿಸುತ್ತಿವೆ ಎಂದು ಪೀರ್ ಮನ್ಸೂರ್ ಆರೋಪಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಜನತೆ ಬಿಜೆಪಿಗೆ ಮತ ನೀಡಬೇಡಿ, ಒಂದು ವೇಳೆ ಮತ ನೀಡಿದರೆ ಹಿಂದೂ ಸಮುದಾಯದವರು ಮುಖ್ಯಮಂತ್ರಿಯಾಗಲಿದ್ದಾರೆ. ಇದು ಕಾಶ್ಮೀರದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲೀಮರಿಗೆ ಶಾಪವಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.
ಮನ್ಸೂರ್ ಅವರ ಈ ಹೇಳಿಕೆ ವಿವಾದಕ್ಕೀಡಾಗಿದ್ದು, ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದೆ. ಜಮ್ಮು-ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 25ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ.