ಬೆಂಗಳೂರು : ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ ಏಕೀಕೃತ ಮಾರುಕಟ್ಟೆ ವ್ಯವಸ್ಥೆ ಹಾಗೂ ಆನ್‌ಲೈನ್ ಮಾರಾಟ ವ್ಯವಸ್ಥೆ ಕುರಿತು ಸಮಗ್ರ ಮಾಹಿತಿಯನ್ನು ಪಡೆದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಈ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಾತ್ಯಕ್ಷಿಕೆ ಮೂಲಕ ಕೃಷಿ ಮಾರಾಟ ನೀತಿ-2013ನ್ನು ಕರ್ನಾಟಕ ರಾಜ್ಯ ಸರ್ಕಾರ ಅನುಷ್ಟಾನಗೊಳಿಸಿರುವ ಕುರಿತು ಸಹಕಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳಾದ ಆರ್.ಮನೋಜ್ ಅವರು ಸವಿವರವಾಗಿ ಮಾಹಿತಿಯನ್ನು ನೀಡಿದರು. ಬಳಿಕ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್ ಮೀನ, ಇಲಾಖೆಯಲ್ಲಿ ಜಾರಿಗೆ ತಂದಿರುವ ವಿವಿಧ ರೈತಪರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರು ಕೃಷಿ ಉತ್ಪನ್ನ ಮಾರಾಟ ಕ್ಷೇತ್ರದಲ್ಲಿ ವಿನೂತನವಾದ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದು ಅಭಿನಂದಿಸಿದರು.
ರಾಜ್ಯದ ಕೃಷಿ ಮಾರುಕಟ್ಟೆಗಳಲ್ಲಿನ ವಹಿವಾಟನ್ನು ಆನ್‌ಲೈನ್ ಮೂಲಕ ನಡೆಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೈತರಿಗೆ ಹೊಸ ರೂಪವನ್ನು ನೀಡಲಾಗಿದೆ. ರಾಷ್ಟ್ರವ್ಯಾಪಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರವನ್ನು ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ವಹಿವಾಟಿಗೂ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಕ್ರಮ ಅಭಿವೃದ್ದಿ ದಿಕ್ಕಿನಲ್ಲಿದೆ. ಇದು ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆನ್‌ಲೈನ್ ಮೂಲಕ ವ್ಯಾಪಾರ ವಹಿವಾಟು ನಡೆಸುವುದರಿಂದ ಮಾರುಕಟ್ಟೆಗಳಲ್ಲಿ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕ ಬೆಲೆ ರೈತರ ಉತ್ಪನ್ನಗಳಿಗೆ ದೊರೆಯಲಿದೆ. ಈ ಯೋಜನೆಯನ್ನು ಶೀಘ್ರವೇ ಆಂದ್ರ ಪ್ರದೇಶದಲ್ಲೂ ಜಾರಿಗೆ ತರುವುದಾಗಿ ಚಂದ್ರಬಾಬು ನಾಯ್ಡುರವರು ತಿಳಿಸಿದರು.