ಕೊಲ್ಕತ್ತಾ : ಪಶ್ಚಿಮ ಬಂಗಾಳದ ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ತೃಣಮೂಲ ಕಾಂಗ್ರೆಸ್ ಸಂಸದ ಕುನಾಲ್ ಘೋಷ್ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.
ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಹಗರಣದ ಹಿಂದೆ ಹಲವು ಪ್ರಭಾವಿಗಳ ಕೈವಾಡವಿದೆ. ಈ ಬಗ್ಗೆ ತಮಗೆ ಮಾಹಿತಿ ಸಿಕ್ಕಿದೆ. ಆದರೂ ಸಿಬಿಐ ಅವರನ್ನು ಬಂಧಿಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಸಿಬಿಐ ಅಧಿಕಾರಿಗಳು ಹಗರಣದ ನಿಜವಾದ ಆರೊಪಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲು ಸಿಬಿಐಗೆ 72 ಗಂಟೆಗಳ ಗಡುವು ನೀಡುತ್ತೇನೆ. ಅಷ್ಟರಲ್ಲಿ ನಿಜವಾದ ಆರೋಪಿಗಲನ್ನು ಬಂಧಿಸದಿದ್ದಲ್ಲಿ ತಾವು ಆತ್ಮಹತ್ಯೆಗೆ ಶರಣಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸಂಸದ ಕುನಾಲ್ ಘೋಷ್ ವಿರುದ್ಧ ತನಿಖೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಕುನಾಲ್ ಸಿಬಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.