ಗೋವಾ : 'ರಕ್ಷಣಾ ಸಚಿವ'ರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ನ.8ರಂದು ,ಗೋವಾ ಮುಖ್ಯಮಂತ್ರಿ ಸ್ಥಾನಕ್ಕೆ ಮನೋಹರ್ ಪರೀಕ್ಕರ್ ರಾಜೀನಾಮೆ ನೀಡಲಿದ್ದಾರೆ.
ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಗೋವಾದ 21 ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಮನೋಹರ್ ಪರೀಕ್ಕರ್, ನ.8ರಂದು ಬಿಜೆಪಿ ಸಂಸದೀಯ ಮಂಡಳಿ ಸಭೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರದಿಂದ ಗೋವಾಕ್ಕೆ ವೀಕ್ಷಕರ ತಂಡ ಆಗಮಿಸಿದ ನಂತರ ನೂತನ ಮುಖ್ಯಮಂತ್ರಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗೋವಾ ನೂತನ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ವಿಧಾನಸಭಾಧ್ಯಕ್ಷ ರಾಜೇಂದ್ರ ಅರ್ಲೇಕರ್, ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜ, ಆರೋಗ್ಯ ಸಚಿವ ಲಕ್ಷ್ಮಿಕಾಂತ್ ಪರ್ಸೇಕರ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.
ಗೋವಾ ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದನ್ನು ಸ್ಪಷ್ಟಪಡಿಸಿದರೂ ಕೇಂದ್ರ ಮಂತ್ರಿಯಾಗುವ ಬಗ್ಗೆ ಮನೋಹರ್ ಪರೀಕ್ಕರ್ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ರಾಜೀನಾಮೆ ನೀಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಸೂಚಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆ. ಅದರಂತೆ ಮುಂದುವರೆಯಲಿದ್ದೇನೆ ಎಂದಷ್ಟೇ ತಿಳಿಸಿದ್ದಾರೆ.