ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ನ.24ರಿಂದ ಆರಂಭವಾಗಲಿದ್ದು, ಒಂದು ತಿಂಗಳಕಾಲ ನಡೆಯಲಿದೆ.
ನ.24ರಿಂದ ನಡೆಯುವ ಅಧಿವೇಶನ ಡಿ.23ರಂದು ಮುಕ್ತಾಯವಾಗಲಿದೆ. 22 ದಿನಗಳ ಕಾಲಾಪದ ಅವಧಿಯಲ್ಲಿ ಬಾಕಿ ಉಳಿದ ಹಲವು ಮಸೂದೆಗಳಿಗೆ ಅನುಮೋದನೆ ದೊರೆಯುವ ನಿರೀಕ್ಷೆಯಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಅಧಿವೇಶನ ದಿನಾಂಕವನ್ನು ಅಂತಿಮಗೊಳಿಸಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ.
ಲೋಕಸಭೆಯಲ್ಲಿ 8 ಮಸೂದೆಗಳು ಹಾಗೂ ರಾಜ್ಯಸಭೆಯಲ್ಲಿ 59 ಮಸೂದೆಗಳು ಅನುಮೋದನೆ ಪಡೆಯದೇ ಬಾಕಿ ಉಳಿದಿದ್ದವು. ಇವುಗಳಲ್ಲಿ ಸರ್ಕಾರ 30-35 ಶಾಸನಗಳನ್ನು ಮಂಡಿಸಿ ಅನುಮೋದನೆ ಪಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಎರಡನೇ ಅಧಿವೇಶನ ಇದಾಗಿದೆ.