ನವದೆಹಲಿ : ವಿದೇಶದಲ್ಲಿರುವ ಕಪ್ಪುಹಣದ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಿದ್ದು, ಮೂವರ ಹೆಸರನ್ನು ಬಹಿರಂಗಗೊಳಿಸಿದೆ.
ಓರ್ವ ಉದ್ಯಮಿ ಹಾಗೂ ಎರಡು ಕಂಪನಿಗಳ ಹೆಸರನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಿದ್ದು, ಮೊದಲ ಪಟ್ಟಿಯಲ್ಲಿ ಯಾವುದೇ ರಾಜಕೀಯ ನಾಯಕರ ಹೆಸರಿಲ್ಲದಿರುವುದು ವಿಶೇಷ.
ಸ್ವಿಸ್ ಬ್ಯಾಂಕ್ ಗಳಲ್ಲಿ ಇಟ್ಟಿರುವ ಕಪ್ಪುಹಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮಧ್ಯಾಹ್ನ 12 ಗಂಟೆಗೆ ಪ್ರಮಾಣಪತ್ರ ಸಲ್ಲಿಸಲಿದೆ. ಈ ಅಫಿಡವಿಟ್ ನಲ್ಲಿ ಡಾಬರ್ ಸಮೂಹ ಸಂಸ್ಥೆಗಳ ನಿರ್ದೇಶಕ ಪ್ರದೀಪ್ ಬರ್ಮನ್, ಗೋವಾದ ಮೈನಿಂಗ್ ಕಂಪನಿ ಮುಖ್ಯಸ್ಥ ರಾಧಾ ಎಸ್ ಟಿಂಬ್ಲೋ ಹಾಗೂ ರಾಜ್ ಕೋಟ್ ಮೂಲದ ಚಿನ್ನದ ವ್ಯಾಪಾರಿ ಪಂಕಜ್ ಚಿಮನ್ ಲಾಲ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರ ಸಲ್ಲಿಸಿರುವ ಮೊದಲ ಪಟ್ಟಿಯಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಹೆಸರಿಲ್ಲ, ವಿಚಾರಣೆ ಆರಂಭವಾದ ಸಂದರ್ಭದಲ್ಲಿ ಸರ್ಕಾರ ಇನ್ನಷ್ಟು ಖಾತೆದಾರ ಹೆಸರುಗಳನ್ನು ಬಹಿರಂಗಗೊಳಿಸಲಿದೆ ಎಂದು ಹೇಳಲಾಗುತ್ತಿದೆ.