ಮುಂಬೈ : ಬಿಜೆಪಿಯಿಂದ ಪ್ರಸ್ತಾವನೆ ಬಂದರೆ ಮಾತ್ರ ಮೈತ್ರಿ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ನಾವು ಸಿಂಹದಂತೆ ಏಕಾಂಗಿಯಾಗಿ ಗೆಲುವು ಸಾಧಿಸಿದ್ದೇವೆ ಎಂದು ಹೇಳಿದ್ದಾರೆ.
ಶಿವಸೇನಾ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಹೇಳಿಕೆ ನೀಡಿರುವ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಾವು ಸಿಂಹದಂತೆ ಏಕಾಂಗಿಯಾಗಿ ಹೋರಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಎಲ್ಲರೂ ನಮ್ಮ ವಿರುದ್ಧವಾಗಿದ್ದರು. ಕಾಂಗ್ರೆಸ್, ಎನ್ ಸಿಪಿ ಕೂಡ ನಮ್ಮ ಎದುರಾಳಿಗಳಾಗಿದ್ದರು . ಇಷ್ಟಾಗ್ಯೂ ಶಿವಸೇನೆ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂದು ಉಲ್ಲೇಖಿಸಿದ್ದಾರೆ.
ಮಹಾರಾಷ್ಟ್ರದ ಜನತೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ, ಈ ಫಲಿತಾಂಶದಿಂದ ಇಲ್ಲಿನ ಜನತೆಗೆ ತೃಪ್ತಿಯಿದೆಯೇ ಎಂದು ಮಹಾರಾಷ್ಟ್ರ ಜನತೆಯನ್ನು ಉದ್ಧವ್ ಪ್ರಶ್ನಿಸಿದ್ದಾರೆ.
ಬಿಜೆಪಿಯಿಂದ ಮೈತ್ರಿ ಪ್ರಸ್ತಾಪ ಬಂದರೆ ಮಾತ್ರ ಆ ಬಗ್ಗೆ ಚಿಂತನೆ ನಡೆಸುವುದಾಗಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಮಧ್ಯಾಹ್ನ ಮುಂಬೈನಲ್ಲಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆ ನಾಯಕರ ಸಭೆ ನಡೆಯಲಿದ್ದು, ಸಭೆಯಲ್ಲಿ ಬಿಜೆಪಿ ಜತೆ ಮೈತ್ರಿ ವಿಚಾರದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.