ಮುಂಬೈ : ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ ಅತಂತ್ರ ವಿಧಾನಸಭೆ ರಚನೆಯಾಗಿದೆ. ಸರ್ಕಾರ ರಚನೆಗೆ ಬಿಜೆಪಿ, ಶಿವಸೇನೆ ಜತೆ ಮರು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅ.20ರಂದು ನಿರ್ಧಾರವಾಗಲಿದೆ.
ಸರ್ಕಾರ ರಚನೆಗೆ 23 ಸ್ಥಾನಗಳ ಕೊರತೆ ಎದುರಿಸುತ್ತಿರುವ ಬಿಜೆಪಿ ಶಿವಸೇನೆಯತ್ತ ದೃಷ್ಟಿ ಹರಿಸಿದೆ. ಈ ನಡುವೆ ಬಿಜೆಪಿಗೆ ಎನ್ ಸಿಪಿ ಬಾಹ್ಯ ಬೆಂಬಲ ನೀಡುವುದಾಗಿ ತಿಳಿಸಿದೆ. ರಾತ್ರಿ ನಡೆದ ಸಂಸದೀಯ ಮಂಡಳಿ ಸಭೆ ವೇಳೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ , ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಧ್ಯಕ್ಷ ಅಮಿತ್ ಶಾ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಶಿವಸೇನೆಗೆ ಉಪಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಆದರೂ ಅಂತಿಮವಾಗಿಲ್ಲ.
ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಜೆ.ಪಿ.ನಡ್ಡಾ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಹಾಗೂ ನನ್ನನ್ನು ಮಹಾರಾಷ್ಟ್ರಕ್ಕೆ ವೀಕ್ಷಕರನ್ನಾಗಿ ಕಳುಹಿಸಲು ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ವೀಕ್ಷಕರು ಮೊದಲು ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲಿದ್ದು, ಬಳಿಕ ಯಾರ ಬೆಂಬಲ ಪಡೆಯಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು, ದೇವೇಂದ್ರ ಫಡ್ನವಿಸ್, ಏಕನಾಥ್ ಖಡ್ಸೆ, ವಿನೋದಾ ತಾವಡೆ, ನಿತಿನ್ ಗಡ್ಕರಿ, ಪಂಕಜಾ ಮುಂಡೆ ಹೆಸರು ಮುಖ್ಯಮಂತ್ರಿ ರೇಸ್ ನಲ್ಲಿ ಪ್ರಮುಖವಾಗಿ ಕೇಳುಬರುತ್ತಿದೆ