ಗುರ್ ಗಾಂವ್ : ಗುರ್ ಗಾಂವ್ ನಲ್ಲಿ ಇಬ್ಬರು ನಾಗಾಲ್ಯಾಂಡ್ ವ್ಯಕ್ತಿಗಳ ಮೇಲೆ ನಡೆದ ಹಲ್ಲೆಯ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು ಜನಾಂಗೀಯ ಹಲ್ಲೆ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈಶಾನ್ಯ ರಾಜ್ಯದ ವಿದ್ಯಾರ್ಥಿಗಳನ್ನು ಭೇಟಿಯಾದ ಕಿರಣ್ ರಿಜ್ಜು, ಜನಾಂಗೀಯ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು. ಈಶಾನ್ಯ ರಾಜ್ಯದವರಿಗೆ ಭದ್ರತೆ ನೀಡುವ ಭರವಸೆ ನೀಡಿದರು.
ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಜನಾಂಗೀಯ ದ್ವೇಷಗಳನ್ನು ಸಹಿಸುವುದಿಲ್ಲ, ನಮ್ಮ ಜನತೆ ಯಾವುದಕ್ಕೂ ಸಂಯಮ ಕಳೆದುಕೊಳ್ಳಬಾರದು ಎಂದು ತಿಳಿಸಿದರು.
ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಭದ್ರತೆಗಾಗಿ ಸಹಾಯವಾಣಿ ಹಾಗೂ ಇಂಥಹ ಸಮಸ್ಯೆಗಳನ್ನು ಪರಿಹರಿಸಲು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭದ್ರತಾ ಸಲಹೆಗಾರರ ಜತೆ ಮಾತುಕತೆ ನಡೆಸಿದ್ದು, ಉನ್ನತ ಮಟ್ಟದ ಸಭೆ ನಡೆಸುವುದಾಗಿ ತಿಳಿಸಿದರು.