ಕೋಲ್ಕತ್ತಾ : 'ಪಶ್ಚಿಮ ಬಂಗಾಳ' ಭಯೋತ್ಪಾದಕರ ಪಾಲಿನ ಸ್ವರ್ಗವಾಗುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಶ್ಚಿಮ ಬಂಗಾಳದಲ್ಲಿ ಅ.17ರಂದು 60-65 ಕಚ್ಚಾ ಬಾಂಬ್ ಗಳು ಪತ್ತೆಯಾಗಿವೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕೃಷಿ ಭೂಮಿಯಲ್ಲಿ ಈ ಕಚ್ಚಾ ಬಾಂಬ್ ಗಳನ್ನು ಹುದುಗಿಸಿಡಲಾಗಿತ್ತು.
ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂಧಿಗಳು ಆಗಮಿಸಿದ್ದು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಬರ್ದ್ವಾನ್ ನ ಮದರಸಾದಲ್ಲಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 39 ನಾಡಬಾಂಬ್ 10 ಕೆ.ಜಿ ಆರ್.ಡಿ.ಎಕ್ಸ್ ಮತ್ತು 40 ಗ್ರೆನೇಡ್ ಗಳನ್ನು ಎನ್.ಐ.ಎ, ಎನ್.ಎಸ್.ಜಿ ತಂಡ ವಶಪಡಿಸಿಕೊಂಡಿದೆ. ಸ್ಫೋಟಕ ಸಂಗ್ರಹ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮೊದಲೂ ಸಹ ಇದೇ ಮದರಸಾದಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು. ಕಳೆದ ಕೆಲ ದಿನಗಳಲ್ಲಿ ರಾಜ್ಯದ ಹಲವೆಡೆ ಬಾಂಬ್ ಸ್ಫೋಟ ಕೂಡ ನಡೆದಿತ್ತು.
ಪಶ್ಚಿಮ ಬಂಗಾಳ ಭಯೋತ್ಪಾದಕರ ಪಾಲಿನ ಸ್ವರ್ಗವಾಗಿದೆ. ಭಯೋತ್ಪಾದನೆ ತಡೆಗಟ್ಟುವಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಈ ಹಿಂದೆ ಗಂಭೀರ ಆರೋಪ ಮಾಡಿತ್ತು.