ನವದೆಹಲಿ : 'ಪೆಟ್ರೋಲ್', ಡೀಸೆಲ್ ದರ ಮತ್ತೊಮ್ಮೆ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿರುವ ಪರಿಣಾಮ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಲಿದೆ.
ಕಳೆದ 2-3ತಿಂಗಳಿನಿಂದ ನಿರಂತರವಾಗಿ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ಅ.15ರ ಮಧ್ಯರಾತ್ರಿಯಿಂದ 1.50-2.50ರೂಪಾಯಿ ಇಳಿಕೆಯಾಗಲಿದೆ. ಅ.13ರಂದೇ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುವ ಸಂಭವವಿತ್ತಾದರೂ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬೆಲೆ ಇಳಿಕೆ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗಿದೆ.
ಅ.15ರಂದು ಎರಡೂ ರಾಜ್ಯಗಳ ಚುನಾವಣೆ ಮುಕ್ತಾಯಗೊಳ್ಳಲಿದ್ದು ಮಧ್ಯರಾತ್ರಿ ವೇಳೆಗೆ ದೇಶದ ವಾಹನ ಸವಾರರಿಗೆ ದರ ಇಳಿಕೆಯ ಸಿಹಿ ಸುದ್ದಿ ದೊರೆಯಲಿದೆ. ಇದಕ್ಕೂ ಮುನ್ನ ಸೆ.30ರಂದೂ ಪೆಟ್ರೋಲ್ ದರ ಇಳಿಕೆಯಾಗಿತ್ತು. ಡಿಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ.