ಹೈದ್ರಾಬಾದ್ : ಆಂಧ್ರಪ್ರದೇಶದಲ್ಲಿ ಹುಡ್ ಹುಡ್ ಚಂಡಮಾರುತ ಅಪ್ಪಳಿಸಿದ್ದು, ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಚಂಡಮಾರುತ ತನ್ನ ಅಬ್ಬರವನ್ನು ಆರಂಭಿಸಿದ್ದು, ಈವರೆಗೆ ಮೂವರು ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಕರಾವಳಿ ಭಾಗದಲ್ಲಿ ಹುಡ್ ಹುಡ್ ಚಂಡಮಾರುತದ ತೀವ್ರತೆ ಹೆಚ್ಚಿದ್ದು, ಗಂಟೆಗೆ 190 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಮರಗಳು ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮನೆ ಕುಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ.
5ರಾಜ್ಯಗಳಲ್ಲಿ ಹುಡ್ ಹುಡ್ ಚಂಡಮಾರುತ ಪ್ರಭಾವ ಬೀರಲಿದೆ. ಆಂದ್ರಪ್ರದೇಶದಲ್ಲಿ ಇನ್ನೂ ನಾಲ್ಕು ದಿನ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಡಿಜಿ ಎಲ್.ಎಸ್.ರಾಥೋರ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾ, ಜಾರ್ಖಂಡ್, ಛತ್ತೀಸ್ ಗಢ ರಾಜ್ಯಗಳಲ್ಲಿ ಹುಡ್ ಹುಡ್ ಚಂಡಮಾರುತ ಪರಿಣಾಮ ಬೀರಲಿದೆ. ಒಡಿಶಾದಲ್ಲಿ ಈಗಾಗಲೇ ಚಂಡಮಾರುತದ ಅಬ್ಬರ ಕ್ಷೀಣಿಸಿದ್ದು, ಗಂಟೆಗೆ 60-70ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ತಿಳಿಸಿದ್ದಾರೆ.