ಹೈದ್ರಾಬಾದ್ : ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಹುಡ್ ಹುಡ್ ಚಂಡಮಾರುತ ದೇಶದ ಪೂರ್ವ ಕರಾವಳಿಗೆ ಹತ್ತಿರವಾಗುತ್ತಿದ್ದು, ಆಂದ್ರಪ್ರದೇಶದ ಕರಾವಳಿ ಮೂಲಕ ಹಾದುಹೋಗಲಿದೆ.
ಆಂಧ್ರದ ವಿಶಾಖಪಟ್ಟಣಂ ಸಮೀಪದ ಕರಾವಳಿ ಮೇಲೆ ಹುಡ್ ಹುಡ್ ಚಂಡಮಾರುತ ತೀವ್ರ ಸ್ವರೂಪದಲ್ಲಿ ಅಪ್ಪಳಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅ.12ರ ವೇಳೆಗೆ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಈಗಾಗಲೇ 330ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ತಿಳಿದುಬಂದಿದೆ.
ಉತ್ತರ ಆಂದ್ರ ಹಾಗೂ ಒಡಿಶಾಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಚಂಡಮಾರುತದ ದಿನದ ಗಾಳಿಯ ವೇಗ ಗಂಟೆಗೆ 130-140 ಕಿ.ಮೀಯಿಂದ 150ಕಿ.ಮೀ ವೇಗದ ವರೆಗೂ ತಲುಪುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಈಗಾಗಲೇ ಸಮುದ್ರದಲ್ಲಿ 6 ಅಡಿ ಎತ್ತರದವರೆಗೂ ರಕ್ಕಸ ಅಲೆಗಳು ಚಿಮ್ಮುತ್ತಿವೆ. ಸಂಜೆವೇಳೆಗೆ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ.
ಮುಂಜಾಗೃತಾ ಕ್ರಮವಾಗಿ ಆಂದ್ರಪ್ರದೇಶದ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಪೂರ್ವಗೋದಾವರಿ, ಪಶ್ಚಿಮ ಗೋದಾವರಿ, ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಂಗಳಲ್ಲಿ ರಜೆ ಘೋಷಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.
ತೀರ ಪ್ರದೇಶದಿಂದ 4.5 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ವಿಶಾಖಪಟ್ಟಣಂನಿಂದ ಹೊರಡುವ ಹಾಗೂ ಬರುವ 37 ರೈಲು ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ.