ಬೆಂಗಳೂರು : ನಿಗಮ ಮಂಡಳಿ ಅಧ್ಯಕ್ಷರ ನೇಮಕಕ್ಕೆ ಕೊನೆಗೂ ಸಮಯ ಕೂಡಿ ಬಂದಿದ್ದು, 70 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಪಟ್ಟಿ ಅಂತಿಮಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪಟ್ಟಿ ಅಂತಿಮಗೊಳಿಸಿದ್ದು, ಇನ್ನೊಂದು ಸುತ್ತಿನ ಮಾತುಕತೆ ಬಾಕಿಯಿದೆ. ಅ.8ರಂದು ಪರಮೇಶ್ವರ್ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಲಿದ್ದು, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ.
ಕ್ಷೇತ್ರವಾರು, ಜಿಲ್ಲಾವಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಶಿಫಾರಸಿನ ಅನ್ವಯ ಪಟ್ಟಿ ಸಿದ್ಧಗೊಂಡಿದ್ದು, 70 ನಿಗಮ ಮಂಡಳಿಗಳಿ ಅಧ್ಯಕ್ಷರ ನೇಮಕ, 14 ಉಪಾಧ್ಯಕ್ಷರು, 650 ನಿರ್ದೇಶಕ ಸದಸ್ಯರ ಹೆಸರುಗಳು ಅಂತಿಮಗೊಂಡಿದೆ.
ಕಾಂಗ್ರೆಸ್ ಕಾರ್ಯಕರ್ತರಿಗೆ ಶೇ.70ರಷ್ಟು ಹಾಗೂ ಶಾಸಕರಿಗೆ ಶೇ.30ರಷ್ಟು ಸ್ಥಾನಗಳ ಅನುಪಾತದ ಆಧಾರದಲ್ಲಿ ಹಂಚಿಕೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಪಟ್ಟಿ ಅಂತಿಮಗೊಳಿಸಿದ್ದು, ಇದರಲ್ಲಿ ಹೈಕಮಾಂಡ್ ಹಸ್ತಕ್ಷೇಪವಿಲ್ಲ ಎನ್ನಲಾಗಿದೆ.