ನವದೆಹಲಿ : ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್(ಜೆ.ಕೆ.ಎಲ್.ಎಫ್) ನ ಮುಖಂಡ ಯಾಸೀನ್ ಮಲ್ಲೀಕ್ ನನ್ನು ಅ.6ರಂದು ಬಂಧಿಸಲಾಗಿದೆ. ಬಕ್ರಿದ್ ಆಚರಣೆ ಹಿನ್ನೆಲೆಯಲ್ಲಿ ಲಾಲ್ ಚೌಕ್ ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಯತ್ನಿಸಿದ ಪರಿಣಾಮ ಯಾಸೀನ್ ಮಲ್ಲೀಕ್ ನನ್ನು ಬಂಧಿಸಲಾಗಿದೆ.
ಸ್ಥಳೀಯ ಉದ್ಯಮಿಗಳು ಆಯೋಜಿಸಿದ್ದ ನಮಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಾಸೀನ್ ಮಲ್ಲೀಕ್ ಆಗಮಿಸಿದ್ದ ಎಂದು ಜೆ.ಕೆ.ಎಲ್.ಎಫ್ ವಕ್ತಾರೊಬ್ಬರು ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಇತ್ತೀಚೆಗಷ್ಟೇ ಪ್ರವಾಹ ಎದುರಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಲಾಲ್ ಚೌಕ್ ನಲ್ಲಿ ಕರ್ಫ್ಯೂ ಜಾರಿ ಮಾಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರತ್ಯೇಕವಾದಿ ನಾಯಕ ಯಾಸೀನ್ ಮಲ್ಲೀಕ್ ನನ್ನು ಬಂಧಿಸಲಾಗಿದೆ ಎಂದು ಶ್ರೀನಗರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಲಾಲ್ ಚೌಕ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಭೇಟಿ ಬೆನ್ನಲ್ಲೇ ಪಾಕಿಸ್ತಾನ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದಿತ್ತು. ಈ ಹಿನ್ನೆಲೆಯಲ್ಲಿ ಬಕ್ರಿದ್ ಆಚರಣೆ ಅಂಗವಾಗಿ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರತ್ಯೇಕವಾದಿ ನಾಯಕ ಯಾಸೀನ್ ಭಾಗವಹಿಸುವುದನ್ನು ತಡೆಯಲಾಗಿದೆ.