ಅಹಮದಾಬಾದ್ : ಬಿಜೆಪಿ-ಶಿವಸೇನೆ ನಡುವಿನ 25 ವರ್ಷಗಳ ಸುದೀರ್ಘ ಮೈತ್ರಿ ಮುರಿದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಉಭಯ ಪಕ್ಷಗಳ ಮೈತ್ರಿ ಮುಂದುವರಿದರೆ ಸಂತೋಷ ಎಂದು ತಿಳಿಸಿದ್ದಾರೆ.
ಅಹಮದಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆಯೊಂದಿಗಿನ ಬಿಜೆಪಿ ಮೈತ್ರಿ ಸುದೀರ್ಘವಾದದ್ದು. ಅಂತಹ ಮೈತ್ರಿ ಮುರಿದು ಬಿದ್ದಿರುವುದು ನೋವಿನ ಸಂಗತಿ. ಒಂದು ವೇಳೆ ನಾನು ಮಧ್ಯಸ್ಥಿಕೆ ವಹಿಸಿದ್ದರೆ ಮೈತ್ರಿ ಮುರಿದುಬೀಳಲು ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರೇ ಹೇಳುವಂತೆ ಶಿವಸೇನೆ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಈ ಸೂತ್ರ ಸರಿಯಲ್ಲ ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಗಬೇಕಿತ್ತು ಎಂದು ಹೇಳುತ್ತಿದ್ದಾರೆ ಎಂದರು.
ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳು ನಡೆಸಿದ ಸಭೆಗಳಲ್ಲಿ ನಾನು ಭಾಗಿಯಾಗಿರಲಿಲ್ಲ, ಈ ವಿಚಾರದಲ್ಲಿ ನನಗೆ ಹೆಚ್ಚಾಗಿ ತಿಳಿದಲ್ಲವಾದರಿಂದ ಹೆಚ್ಚಾಗಿ ನನ್ನನ್ನು ತೊಡಗಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.