ವಾಷಿಂಗ್ಟನ್ : ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾದ ಪ್ರಮುಖ 11 ಕಂಪನಿಗಳ ಸಿಇಒಗಳ ಜತೆ ಸಭೆ ನಡೆಸಿದ್ದಾರೆ.
ಭಾರತದ ಮೂಲಸೌಕರ್ಯ ಅಭಿವೃದ್ಧಿಗಾಗಿ ಹೂಡಿಕೆ ಮಾಡಿ, ಅದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜೀವನ ಗುಣಮಟ್ಟ ಹೆಚ್ಚುತ್ತದೆ ಎಂದು ಕಂಪನಿಗಳ ಮನವೊಲಿಕೆ ಯತ್ನ ನಡೆಸಿದರು.
ಮೋದಿ ಜತೆ ಸಭೆಯಲ್ಲಿ ಪೆಪ್ಸಿಕೋ ಕಂಪನಿಯ ಮುಖ್ಯಸ್ಥೆ ಭಾರತೀಯ ಮೂಲದ ಇಂದ್ರಾ ನೂಯಿ, ಗೂಗಲ್ ಕಂಪನಿ ಅಧ್ಯಕ್ಷ ಎರಿಕ್ ಸ್ಮಿತ್, ಸಿಟಿ ಗ್ರೂಪ್ ಮುಖ್ಯಸ್ಥ ಮೆಕಲ್ ಕಾರ್ಬಟ್ ಸೇರಿ ಹಲವರು ಪಾಲ್ಗೊಂಡಿದ್ದರು.
ಕಲ್ಲಿದ್ದಲು ಗಣಿ ಗುತ್ತಿಗೆಗಳನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಹಳೆಯದನ್ನೆಲ್ಲಾ ಸ್ವಚ್ಛಗೊಳಿಸಿ ಮುನ್ನುಗ್ಗಲು ಒಳ್ಳೆಯ ಅವಕಾಶ ಎಂದು ಅಮೆರಿಕಾ ಕಂಪನಿ ಸಿಇಒಗಳ ಜತೆಗಿನ ಸಭೆ ವೇಳೆ ಮೋದಿ ತಿಳಿಸಿದರು.
ಸೆ.30ರಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಮತ್ತು ನರೇಂದ್ರ ಮೋದಿ ಅವರ ನಡುವಿನ ಬಹುನಿರೀಕ್ಷಿತ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
ಇದು ಉಭಯ ನಾಯಕರ ನಡುವಿನ ಮೊದಲ ಮಾತುಕತೆಯಾಗಿದ್ದು, ಈ ವೇಳೆ ಭಾರತ-ಅಮೆರಿಕಾ ಬಾಂಧ್ಯವ್ಯ, ಉಗ್ರವಾದ ಮೊದಲಾದ ವಿಚಾರಗಳು ಪ್ರಸ್ತಾಪವಾಗುವ ನಿರೀಕ್ಷೆಯಿದೆ.
ಚಿತ್ರ ಕೃಪೆ:www.pmindia.gov.in