ಮುಂಬೈ : 'ಬಾಲಿ ವುಡ್' ನಟ ಸಲ್ಮಾನ್ ಖಾನ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಪ್ರಕರಣ ದಾಖಲಿಸಲಾಗಿದೆ.
ಸಲ್ಮಾನ್ ಖಾನ್ ನಡೆಸುತ್ತಿರುವ ಬೀಯಿಂಗ್ ಹ್ಯೂಮನ್ ಎನ್.ಜಿ.ಒ, ಇತ್ತೀಚೆಗಷ್ಟೇ ಆಯೋಜಿಸಿದ್ದ ಷ್ಯಾಷನ್ ಶೋನಲ್ಲಿ ರೂಪದರ್ಶಿಯೊಬ್ಬರು ಧರಿಸಿದ್ದ ಬಟ್ಟೆ ಇಸ್ಲಾಂ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಅನ್ವಯ ಸಲ್ಮಾನ್ ಖಾನ್ ವಿರುದ್ಧ ಮುಂಬೈ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 295 ಎ ಅಡಿ ಎಫ್.ಐ.ಆರ್ ದಾಖಲಿಸಿದ್ದಾರೆ.
ಷ್ಯಾಷನ್ ಶೋನಲ್ಲಿ ಮಾಡೆಲ್ ಒಬ್ಬರು ತೊಟ್ಟಿದ್ದ ಧಿರಿಸಿನಲ್ಲಿ ಇಸ್ಲಾಂ ವಿರೋಧಿ, ಮುಸ್ಲಿಂ ಜನಾಂಗಕ್ಕೆ ಭಾವನೆ ಧಕ್ಕೆ ತರುವ ವಾಕ್ಯಗಳಿತ್ತು ಎಂದು ಮಹಮ್ಮದ್ ಅಸಿಮ್ ಹಾಗೂ ಮಹಮ್ಮದ್ ಆರೀಫ್ ಆರೋಪಿಸಿ ಬೀಯಿಂಗ್ ಹ್ಯೂಮನ್ ಸಂಸ್ಥೆ ಹಾಗೂ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರುದಾರರು ನೀಡಿರುವ ಫ್ಯಾಷನ್ ಶೋ ಕಾರ್ಯಕ್ರಮದ ವಿಡಿಯೋ ಕ್ಲಿಪ್ಪಿಂಗ್ ಪರಿಶೀಲಿಸಲಾಗುತ್ತಿದೆ ಎಂದು ಪ್ರಕರಣದ ತನಿಖಾಧಿಕಾರಿ ದಿಲೀಪ್ ಚವಾಣ್ ಹೇಳಿದ್ದಾರೆ.
ನಟ ಸಲ್ಮಾನ್ ಖಾನ್, ಬೀಯಿಂಗ್ ಹ್ಯೂಮನ್ ಸಂಸ್ಥೆ ಮೂಲಕ ಅನಾಥ, ನಿರ್ಗತಿಕ ಮಕ್ಕಳ ಶಿಕ್ಷಣ, ಕ್ಯಾನ್ಸರ್ ಮುಂತಾದ ಮಾರಕ ರೋಗ ಪೀಡಿತರ ಚಿಕಿತ್ಸೆ ಸೇರಿದಂತೆ ಸಮಾಜಕ್ಕೆ ನೆರವಾಗುವಂತಹ ಕೆಲಸ ಮಾಡುತ್ತಿದ್ದಾರೆ.