ಬೆಂಗಳೂರು : 'ವಂಚನೆ ಪ್ರಕರಣ' ಎದುರಿಸುತ್ತಿರುವ ಕಾರ್ತಿಕ್ ಗೌಡ ಸೆ.12ರಂದು ವಿಚಾರಣೆಗಾಗಿ ಪೊಲೀಸರ ಮುಂದೆ ಹಾಜರಾಗಿದ್ದಾರೆ.
ಬೆಳಿಗ್ಗೆ ಸುಮಾರು 6:15 ವೇಳೆಗೆ ಆರ್.ಟಿ ನಗರ ಪೊಲೀಸ್ ಠಾಣೆಗೆ ಹಾಜರಾಗಿರುವ ಕಾರ್ತಿಕ್ ಗೌಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಓಂಕಾರಯ್ಯ ನೇತೃತ್ವದ ತಂಡ ಕಾರ್ತಿಕ್ ಗೌಡ ಅವರನ್ನು ಸುಮಾರು 30 ನಿಮಿಷಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಇದೇ ವೇಳೆ ಅತ್ಯಾಚಾರ ಪ್ರಕರಣವೂ ದಾಖಲಾಗಿರುವುದರಿಂದ ಕಾರ್ತಿಕ್ ಗೌಡ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ನಟಿ ಮೈತ್ರಿಯಾ ಗೌಡ, ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ವಿರುದ್ಧ ದಾಖಲಿಸಿದ್ದ ವಂಚನೆ ಪ್ರಕರಣದಲ್ಲಿ ಸೋಮವಾರ ಕಾರ್ತಿಕ್ ಗೌಡ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿತ್ತು.
ನಟಿ ಮೈತ್ರಿಯಾ ಗೌಡ ಕಾರ್ತಿಕ್ ಗೌಡ ವಿರುದ್ಧ ವಂಚನೆ ಮತ್ತು ಅತ್ಯಾಚಾರದ ಆರೋಪ ಹೊರಿಸಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.