ನವದೆಹಲಿ : ಭಾರತದಲ್ಲಿ ಅಲ್ಪಸಂಖ್ಯಾತರೆಂಬ ಪರಿಕಲ್ಪನೆಯನ್ನು ತೆಗೆದುಹಾಕಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನ ಮುಸ್ಲಿಂ ಘಟಕದ ಮುಖಂಡ ಮೊಹಮದ್ ಜಹಿದುಲ್ ದಿವಾನ್ ಅಭಿಪ್ರಾಯಪಟ್ಟಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ(ಜೆ.ಎನ್.ಯು) ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿರುವ ಜಹಿದುಲ್ ದಿನಾವ್, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಹಿಂದುಳಿದವರ ಅಭಿವೃದ್ಧಿಯಾಗಬೇಕು. ಆದರೆ, ಹಿಂದುಳಿದವರ ಅಭಿವೃದ್ಧಿ ಹೆಸರಿನಲ್ಲಿ ಅಲ್ಪಸಂಖ್ಯಾತರೆಂಬ ಪರಿಕಲ್ಪನೆಯೇ ಭಾರತೀಯರಲ್ಲಿ ಕೆಟ್ಟ ಭಾವನೆಯನ್ನು ಮೂಡಿಸುತ್ತದೆ. ಇಂತಹ ಪರಿಕಲ್ಪನೆ ನಮ್ಮ ದೇಶದಿಂದ ದೂರವಾಗಬೇಕು ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗದ ಜನತೆಯನ್ನು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದೆತರುವ ಕೆಲಸವಾಗಬೇಕಿದೆ. ಆದರೆ ಅವರ ಅಭಿವೃದ್ಧಿಗೆ ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಇದಕ್ಕೆ ಅಡ್ಡಿಯುಂಟುಮಾಡುತ್ತಿದೆ ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರೆಂಬ ಪರಿಕಲ್ಪನೆ ಮೊದಲು ತೊಲಗಬೇಕೆಂದು ಜಹಿದುಲ್ ಬಲವಾದ ಅಭಿಪ್ರಾಯ ಮಂಡಿಸಿದ್ದಾರೆ.
ಜೆ.ಎನ್.ಯು ವಿಶ್ವವಿದ್ಯಾಲಯದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಜಹಿದುಲ್ ಹಿಂದಿ ಮತ್ತು ಅಸ್ಸಾಮಿ ಸಾಹಿತ್ಯದಲ್ಲಿ ಪಿ.ಹೆಚ್.ಡಿ ಮಾಡುತ್ತಿದ್ದಾರೆ. ಜಹಿದುಲ್ ದಿನಾವ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಜೆ.ಎನ್.ಯು ವಿಶ್ವವಿದ್ಯಾನಿಲಯದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಎರಡನೇ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ 1998-1999ಅಲ್ಲಿ ಎಬಿವಿಪಿಯಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು. ಸೆ.12ರಂದು ಜೆ.ಎನ್.ಯು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯಲಿದೆ.