ಇಸ್ಲಾಮಾಬಾದ್ : ಆಡಳಿತ ವಿರೋಧಿ ಪ್ರತಿಭಟನೆ ಎದುರಿಸುತ್ತಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಸೆ.2ರಂದು ಪಾಕಿಸ್ತಾನದ ರಾಜಕೀಯ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ್ದು ರಾಜೀನಾಮೆಯನ್ನೂ ಕೊಡುವುದಿಲ್ಲ, ರಜೆ ಮೇಲೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಸಂವಿಧಾನದ ನಿಯಮವಿದ್ದು ಅದನ್ನು ಮೀರಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾ ನಿರತ ಇಮ್ರಾನ್ ಖಾ ಗೆ ಷರೀಫ್ ಎಚ್ಚರಿಸಿದ್ದಾರೆ. ನವಾಜ್ ಷರೀಫ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಇತರ ಪಕ್ಷದ ಸದಸ್ಯರು ಆಡಳಿತ ವಿರೋಧಿ ಪ್ರತಿಭಟನೆ ಎದುರಿಸುತ್ತಿರುವ ನವಾಜ್ ಷರೀಫ್ ಅವರನ್ನು ಬೆಂಬಲಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಿರ್ಧರಿಸಿದ್ದಾರೆ ಎಂದು ವರದಿ ಮಾಡಲಾಗಿದೆ.
ನವಾಜ್ ಷರೀಫ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ವಿಪಕ್ಷ ನಾಯಕ ಇಮ್ರಾನ್ ಖಾನ್ ಹಾಗೂ ಬೆಂಬಲಿಗರು ಪಾಕಿಸ್ತಾನ ಸಂಸತ್ ಮೇಲೆ ದಾಳಿ ನಡೆಸಿರುವುದನ್ನು ಪಾಕ್ ನ ರಾಜಕೀಯ ಪಕ್ಷಗಳು ಖಂಡಿಸಿದ್ದು ಇಮ್ರಾನ್ ಖಾನ್ ಹಾಗೂ ಬೆಂಬಲಿಗರು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ.
ಆಡಳಿತ ವಿರೋಧಿ ಪ್ರತಿಭಟನೆ ಹಿನ್ನೆಲೆಯಲ್ಲಿ ಪಾಕ್ ನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸೈಯದ್ ಖುರ್ಷಿದ್ ಷಾ, ಮೆಹಮೂದ್ ಖಾನ್, ಮೌಲಾನಾ ಫಜ್ಲೂರ್ ರೆಹಮಾನ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಎಲ್ಲಾ ಮುಖಂಡರೂ ಪಾಕ್ ಪ್ರಧಾನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆಸಿರುವ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ರಾಜೀನಾಮೆಗೆ ಒತ್ತಾಯಿಸಿ, ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹಾಗೂ ಧರ್ಮ ಗುರು ತಾಹಿರ್ ಉಲ್ ಖಾದ್ರಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.