ಬೆಂಗಳೂರು : ರಾಜ್ಯದ ನೂತನ ರಾಜ್ಯಪಾಲರಾಗಿ ವಾಜುಭಾಯಿ ರೂಡಭಾಯಿ ವಾಲಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಂಜೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೈಕೋರ್ಟ್ ನ್ಯಾ.ವಘೇಲಾ ಪ್ರತಿಜ್ನಾವಿಧಿ ಬೋಧಿಸಿದರು. ದೇವರ ಹೆಸರಿನಲ್ಲಿ ಪ್ರತಿಜ್ನಾವಿಧಿ ಸ್ವೀಕರಿಸಿದ ವಾಜುಭಾಯಿ ವಾಲಾ ಕರ್ನಾಟಕದ ನೂತನ ರಾಜ್ಯಪಾಲರಾಗಿ ಅಧಿಕಾರವಹಿಸಿಕೊಂಡರು.
ಪದಗ್ರಹಣ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್, ಸಚಿವರಾದ ಅರ್.ವಿ.ದೇಶಪಾಂಡೆ, ವಿನಯ್ ಕುಮಾರ್ ಸೊರಕೆ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರು ಭಾಗಿಯಾಗಿದ್ದರು.
ನೂತನ ರಾಜ್ಯಪಾಲರಿಗೆ ನ್ಯಾ.ವಘೇಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೂ ಗುಚ್ಛ ನೀಡಿ ಅಭಿನಂದಿಸಿದರು.
ರಾಜ್ಯಪಾಲರಾಗಿ ಹಂಸರಾಜ್ ಭಾರದ್ವಾಜ್ ಅವಧಿ ಮುಗಿದ ಬಳಿಕ ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರಿಗೆ ಹೆಚ್ಚುವರಿಯಾಗಿ ರಾಜ್ಯದ ರಾಜ್ಯಪಾಲರ ಜವಾಬ್ದಾರಿಯನ್ನು ವಹಿಸಲಾಗಿತ್ತು. ಕಳೆದವಾರ ವಾಜುಭಾಯಿ ವಾಲಾರನ್ನು ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದರು.