ಬೆಂಗಳೂರು : ರಾಜ್ಯದ ನೂತನ ರಾಜ್ಯಪಾಲರಾಗಿ ವಾಜುಭಾಯಿ ರೂಡಭಾಯಿ ವಾಲಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ವಾಜುಭಾಯಿ ವಾಲಾ ಈಗಾಗಲೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವಾಜುಬಾಯಿ ವಾಲಾರನ್ನು ಗೃಹ ಸಚಿವ ಕೆ.ಜೆ.ಜಾರ್ಜ್ ಬರಮಾಡಿಕೊಂಡಿದ್ದಾರೆ.
ಸಂಜೆ 5ಗಂಟೆಗೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ವಾಜುಭಾಯಿ ವಾಲಾ ಕರ್ನಾಟಕದ ನೂತನ ರಾಜ್ಯಪಾಲರಾಗಿ ಪದಗ್ರಹಣ ಮಾಡಲಿದ್ದು, ಹೈಕೋರ್ಟ್ ನ್ಯಾ.ವಘೇಲಾ ಪ್ರತಿಜ್ನಾವಿಧಿ ಬೋಧಿಸಲಿದ್ದಾರೆ.
ರಾಜ್ಯಪಾಲರಾಗಿ ಹಂಸರಾಜ್ ಭಾರದ್ವಾಜ್ ಅವಧಿ ಮುಗಿದ ಬಳಿಕ ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರಿಗೆ ಹೆಚ್ಚುವರಿಯಾಗಿ ರಾಜ್ಯದ ರಾಜ್ಯಪಾಲರ ಜವಾಬ್ದಾರಿಯನ್ನು ವಹಿಸಲಾಗಿತ್ತು. ಗುಜರಾತ್ ವಿಧಾನಸಭೆ ಸ್ಪೀಕರ್ ಆಗಿದ್ದ ವಾಜುಭಾಯಿ ವಾಲಾರನ್ನು ಕಳೆದವಾರ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದರು.