ಪಂಜಾಬ್ : 'ಪಂಜಾಬ್' ನ ಪಠಾಣ್ ಕೋಟ್ ನ ಭಾರತೀಯ ವಾಯುಪಡೆಯ ನೌಕರನನ್ನು ಬಂಧಿಸಲಾಗಿದೆ. ವಾಯುಪಡೆ ಕಾರ್ಯತಂತ್ರದ ಮಾಹಿತಿಯನ್ನು ಪಾಕಿಸ್ತಾನ ಮಹಿಳೆಯೊಂದಿಗೆ ಹಂಚಿಕೊಂಡಿರುವ ಆರೋಪದಡಿ ವಾಯುಪಡೆ ನೌಕರ ಸುನಿಲ್ ಕುಮಾರ್ ಬಂಧನಕ್ಕೊಳಗಾಗಿದ್ದಾನೆ.
ಬಂಧಿತ ಆರೋಪಿ ಸುನಿಲ್ ಜೋಧ್ ಪುರ ಮೂಲದವನಾಗಿದ್ದು ಸ್ಥಳೀಯ ನ್ಯಾಯಾಲಯ ಆತನನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಪಠಾಣ್ ಕೋಟ್ ಎಸ್.ಪಿ ರಾಕೇಶ್ ಕೌಶಲ್ ತಿಳಿಸಿದ್ದಾರೆ.
ವಾಯುಪಡೆ ನೌಕರ ಸುನಿಲ್ ಕುಮಾರ್, ಮೀನಾ ರೈನಾ ಎಂಬ ಹೆಸರಿನಲ್ಲಿ ಐ.ಡಿ ಹೊಂದಿರುವ ಮಹಿಳೆಗೆ ಕಳಿಸಿರುವ ಇ-ಮೇಲ್ ಬಗ್ಗೆ ವಾಯುಪಡೆ ಸೈಬರ್ ತಂಡ ಮಾಹಿತಿ ಕಲೆಹಾಕಿದೆ ಎಂದು ಕೌಶಲ್ ತಿಳಿಸಿದ್ದಾರೆ. ಐ.ಎ.ಎಫ್ ಅಧಿಕಾರಿಗಳು ಸುನಿಲ್ ಕುಮಾರ್ ನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.
ಸಾಮಾಜಿಕ ಜಾಲ ತಾಣದ ಮೂಲಕ ಸುನಿಲ್ ಕುಮಾರ್, ಪಾಕಿಸ್ತಾನ ಮಹಿಳೆಯನ್ನು ಪರಿಚಯ ಮಾಡಿಕೊಂಡಿರುವ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪರಿಚಯ ಮಾಡಿಕೊಂಡ ಪಾಕ್ ಮಹಿಳೆ, ಭಾರತೀಯ ವಾಯುಪಡೆ ಕಾರ್ಯತಂತ್ರದ ಬಗ್ಗೆ ಪ್ರತಿ ಮಾಹಿತಿ ನೀಡುವುದಕ್ಕಾಗಿ ಆತನಿಗೆ ಇಂತಿಷ್ಟು ಹಣ ನೀಡುತ್ತಿದ್ದಳು ಎಂಬ ಅಘಾತಕಾರಿ ಸುದ್ದಿ ಹೊರಬಿದ್ದಿದೆ.
ಸುನಿಲ್ ಕುಮಾರ್ ಸಾಮಾಜಿಕ ಜಾಲ ತಾಣದ ಖಾತೆ, ಇ-ಮೇಲ್ ಗಳ ಮೇಲೆ ಕಣ್ಣಿಟ್ಟಿದ್ದ ವಾಯುಪಡೆ, ಬಂಧಿತ ಆರೋಪಿ ಹಣಕ್ಕಾಗಿ ಪಾಕಿಸ್ತಾನಿ ಮಹಿಳೆಗೆ ಗೌಪ್ಯ ಮಾಹಿತಿ ಬಹಿರಂಗ ಪಡಿಸುತ್ತಿದ್ದದ್ದನ್ನು ಸ್ಪಷ್ಟಪಡಿಸಿದೆ.