ಪಂಜಾಬ್ : 'ಕಾಶ್ಮೀರ' ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾದ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಪಂಜಾಬ್ ನ ಅಂಬಾಲ-ಚಂಡೀಗಢ ಹೈವೇ ಬಳಿ ಇರುವ ಸ್ವಾಮಿ ಪರಮಾನಂದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿದೆ.
ಆ.27ರ ರಾತ್ರಿ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಕಾಶ್ಮೀರ ಮೂಲದ ಯುವಕರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಇದಕ್ಕೆ ಹಾಸ್ಟೆಲ್ ನ ಇನ್ನಿತರ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಹಾಗೂ ಪಾಕ್ ಪರ ಘೋಷಣೆ ಕೂಗಿದ್ದನ್ನು ವಿರೋಧಿಸಿದ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸೆ.8ರ ವರೆಗೆ ಸ್ವಾಮಿ ಪರಮಾನಂದ ಕಾಲೇಜ್ ನ್ನು ಬಂದ್ ಮಾಡಲಾಗಿದೆ.
ಕಳೆದ ಮಾರ್ಚ್ ನಲ್ಲಿ ಮೀರತ್ ವಿಶ್ವವಿದ್ಯಾನಿಲಯದಲ್ಲೂ ಇಂತದ್ದೇ ಘಟನೆ ನಡೆದಿತ್ತು. ವಿಶ್ವವಿದ್ಯಾನಿಲಯದಲ್ಲಿದ್ದ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಈ ಹಿನ್ನೆಲೆಯಲ್ಲಿ 67ಜನ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಮೀರತ್ ವಿಶ್ವವಿದ್ಯಾನಿಯಲದ ಕ್ರಮವನ್ನು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಕಟುವಾಗಿ ಟೀಕಿಸಿದ್ದರು.