ಜಮ್ಮು-ಕಾಶ್ಮೀರ : ದ್ವಿಪಕ್ಷೀಯ ಮಾತುಕತೆ ರದ್ದುಗೊಳಿಸಿದ್ದರೂ ಬುದ್ದಿ ಕಲಿಯದ ಪಾಕಿಸ್ತಾನ, ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಆ.21ರ ನಡುರಾತ್ರಿ ಜಮ್ಮು-ಕಾಶ್ಮೀರದ ಆರ್.ಎಸ್ ಪುರ ಸೆಕ್ಟರ್ ನಲ್ಲಿ 2 ಬಿ.ಎಸ್.ಎಫ್ ತುಕಡಿಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.
ಪಾಕಿಸ್ತಾನ ಯೋಧರು ಶೆಲ್ ಗಳನ್ನು ಬಳಸಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ದಾಳಿಯಲ್ಲಿ ಓರ್ವ ನಾಗರಿಕನಿಗೂ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಎರಡು ವಾರಗಳಲ್ಲಿ ಪಾಕಿಸ್ತಾನ 14 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದರ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಪಾಕ್ ನೊಂದಿಗೆ ದ್ವಿಪಕ್ಷೀಯ ಮಾತುಕತೆ ರದ್ದುಗೊಳಿಸಿದೆ. ರಕ್ಷಣಾ ಸಚಿವ ಅರುಣ್ ಜೇಟ್ಲಿ, ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್, ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದರೂ ಸಹ ಪಾಕಿಸ್ತಾನ ಬುದ್ದಿ ಕಲಿತಿಲ್ಲ.