ಅಸ್ಸಾಂ : ಅಸ್ಸಾಂ ನಲ್ಲಿ ಬೋಡೋ ಉಗ್ರ ಸಂಘಟನೆ ಅಟ್ಟಹಾಸ ಮಿತಿಮೀರಿದ್ದು ಚಿರಂಗ್ ಜಿಲ್ಲೆಯಲ್ಲಿ ಅಸ್ಸಾಂ ಯುವತಿಯೋರ್ವಳನ್ನು ಹತ್ಯೆ ಮಾಡಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಹತ್ಯೆಗೀಡಾಗಿರುವ ಯುವತಿ ಬೋಡೋ ಸಂಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಉಗ್ರರು ಹೇಳಿದ್ದಾರೆ. ಐವರು ಬೋಡೋ ಉಗ್ರರನ್ನು ಹತ್ಯೆ ಮಾಡಿರುವುದಕ್ಕಾಗಿ ಈ ಮೂಲಕ ಸೇಡು ತೀರಿಸಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಬೋಡೋ ಉಗ್ರರು ಮತ್ತಷ್ಟು ಜನರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಪೊಲೀಸರು ಮತ್ತು ಸೇನಾ ತಂಡಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐವರು ಬೋಡೋ ಉಗ್ರರು ಹತ್ಯೆಯಾಗಿದ್ದರು. ಪೊಲೀಸರು ಬೋಡೋ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ.
ಇದೇ ವೇಳೆ ಗೋಲ್ಗಾಟ್ ಜಿಲ್ಲೆಯಲ್ಲಿ ಪೊಲೀಸರ ಗುಂಡಿಗೆ 4 ಜನ ಬಲಿಯಾಗಿ 30 ಮಂದಿ ಗಾಯಗೊಂಡಿದ್ದಾರೆ.ಗೋಲ್ಗಾಟ್ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ.
ಅಸ್ಸಾಂ-ನಾಗಾಲ್ಯಾಂಡ್ ನಡುವೆ 50 ವರ್ಷಗಳಿಂದಲೂ ಗಡಿ ವಿವಾದವಿದೆ. ಗಡಿಯಲ್ಲಿನ ಭದ್ರತೆ ವಿಚಾರದಲ್ಲಿ ಉಭಯ ರಾಜ್ಯಗಳ ಪೊಲೀಸರಿಗೆ ಅಧಿಕಾರವಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಬಿ.ಎಸ್.ಎಫ್ ಅನ್ನು ನಿಯೋಜಿಸಿದೆ. ಈ ಮಧ್ಯೆ ಬೋಡೋ ಉಗ್ರರು ಗಡಿ ಭಾಗದಲ್ಲಿ ಪೊಲೀಸರ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸಂಬಂಧಿಸಿದ ರಾಜ್ಯಗಳ ವರದಿ ಕೇಳಿದ್ದು, ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಮತ್ತು ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್.ಜೆಲಿನ್ ಜತೆ ಮಾತುಕತೆ ನಡೆಸಲಿದೆ.