ಬಳ್ಳಾರಿ : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ವಾರ್ಥಕ್ಕಾಗಿ ಬಳ್ಳಾರಿಗೆ ಆಗಮಿಸಿದ್ದಾರೆ, ಬಳ್ಳಾರಿ ಸಂಪತ್ತಿನೆ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣು ಬಿದ್ದಿದೆ ಎಂದು ಮಾಜಿ ಸಂಸದೆ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದ್ದಾರೆ.
ಶಿಕಾರಿಪುರ, ಬಳ್ಳಾರಿ ಹಾಗೂ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರಗಳಲ್ಲಿ ಆ.21ರಂದು ನಡೆಯಲಿರುವ ಉಪಚುನಾವಣೆಯ ಪ್ರಚಾರಕ್ಕೆ ಸಂಜೆ ತೆರೆ ಬೀಳಲಿರುವ ಹಿನ್ನಲೆಯಲ್ಲಿ ರಾಜಕೀಯ ನಾಯಕರ ಅಬ್ಬರದ ಪ್ರಚಾರ ಜೋರಾಗಿ ಸಾಗಿದೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿನಿ ಗೌಡ, ಸ್ವಾರ್ಥಕ್ಕಾಗಿ ಡಿ.ಕೆ.ಶಿವಕುಮಾರ್ ಬಳ್ಳಾರಿ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಳ್ಳಾರಿ ಸಂಪತ್ತಿನ ಮೇಲೆ ಅವರ ಕಣ್ಣಿದೆ. ಕನಕಪುರವನ್ನು ಕೊಳ್ಳೆಹೊಡೆದ ಬಳಿಕ ಬಳ್ಳಾರಿಯ ಸಂಪತ್ತು ಲೂಟಿ ಮಾಡಲು ಕಣ್ಣುಹಾಕಿದ್ದಾರೆ ಎಂದು ಆರೋಪಿಸಿದರು.
ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವ್ಯಾಹತವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಡಿನೋಟಿಫಿಕೇಷನ್ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಕಾಗ್ರೆಸ್ ಗೆದ್ದರೆ ಅವರಿಗೆ ಲಾಭವಾಗಲಿದೆ ಎಂದರು.
ಮುಖ್ಯಮಂತ್ರಿ ಕುರ್ಚಿಯ ಒಂದು ಕಾಲು ಡಿ.ಕೆ.ಶಿವಕುಮಾರ್ ಕೈಲಿದೆ ಎಂದು ವ್ಯಂಗ್ಯ ವಾಡಿದ ಅವರು, ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಭೀತಿಯಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ನಮಗಿಂತಲೂ ಹೆಚ್ಚಿನ ನಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗಾಗಲಿದೆ. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ನಾಯಕರನ್ನು ನಿರ್ಲಕ್ಷ್ಯ ಮಾಡಿರುವ ಡಿ.ಕೆ.ಶಿವಕುಮಾರ್, ಬಳ್ಳಾರಿಯ ಅಧಿಕಾರಿಗಳಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.