ನವದೆಹಲಿ : ಭಾರತದೊಂದಿಗೆ ಪಾಕಿಸ್ತಾನ ಸಹ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಸಂಭ್ರಮದಲ್ಲಿದೆ. ಪಾಕಿಸ್ತಾನದ 68ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಶುಭ ಹಾರೈಸಿದ್ದಾರೆ.
ಪಾಕಿಸ್ತಾನ ಸ್ವಾಂತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅಲ್ಲಿನ ಜನತೆಗೆ ಶುಭಾಷಯಗಳನ್ನು ತಿಳಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುವ ಹಳೇ ಚಾಳಿ ಮುಂದುವರೆಸಿರುವ ಸಂದರ್ಭದಲ್ಲೇ ಮೋದಿ ಪಾಕ್ ಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಷಯಗಳನ್ನು ತಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಒಂದೆಡೆ, ಭಾರತದೊಂದಿಗೆ ಉತ್ತಮ ಸಂಬಂಧ ಮುಂದುವರೆಸಲು ಬಯಸುತ್ತದೆ ಎಂದು ಹೇಳುತ್ತಿರುವ ಪಾಕಿಸ್ತಾನ ಮತ್ತೊಂದೆಡೆ ಗಡಿ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುವುದೂ ಅಲ್ಲದೇ ಜಮ್ಮು-ಕಾಶ್ಮೀರದ ವಿಷಯವನ್ನು ಮತ್ತೆ ಪ್ರಸ್ತಾಪಿಸುತ್ತಿದೆ.
ಗುಂಡಿನ ಸದ್ದು ಕೇಳಿಸಿಕೊಂಡು ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದ ಪ್ರಧಾನಿ ಮೋದಿ, ಕಾರ್ಗಿಲ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಣ ಹೇಡಿ ಪಾಕಿಸ್ತಾನಕ್ಕೆ ಯುದ್ಧ ಮಾಡುವ ಧೈರ್ಯವಿಲ್ಲ ಎಂದು ಹೇಳಿದ್ದರು. ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದಕ್ಕೆ ಮೋದಿ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಪಾಕ್ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜನತೆಗೆ ಮೋದಿ ಟ್ವಿಟರ್ ಮೂಲಕ ಶುಭ ಹಾರೈಸಿರುವುದು ಎಲ್ಲರ ಹುಬ್ಬೇರಿಸಿದೆ.