ಜಮ್ಮು-ಕಾಶ್ಮೀರ : ಭಾರತದೊಂದಿಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಪಾಕ್ ಪ್ರಧಾನಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರ ಬೆನ್ನಲ್ಲೇ, ಭಾರತದ ಗಡಿ ಭಾಗದಲ್ಲಿ ಪಾಕಿಸ್ತಾನಿ ಯೋಧರು ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿರುವುದು ವಿಪರ್ಯಾಸ!
ಕಳೆದ 48ಗಂಟೆಯೊಳಗೆ ಪಾಕ್ ಸೈನಿಕರು ಮೂರನೇ ಬಾರಿಗೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು ಇಬ್ಬರು ಬಿ.ಎಸ್.ಎಫ್ ಯೋಧರು ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
ಜಮ್ಮು-ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ನಲ್ಲಿ ಭಾರತದ ಮುಂಚೂಣಿ ಗಡಿ ಠಾಣೆಯ ಪೈಕಿ 7 ಠಾಣೆಗಳನ್ನು ಗುರಿಯನ್ನಾಗಿರಿಸಿ ಪಾಕ್ ಸೈನಿಕರು ಅಪ್ರಚೋದಿತ ದಾಳಿ ನಡೆಸುತ್ತಿದ್ದಾರೆ. ಪಾಕ್ ಸೈನಿಕರ ಗುಂಡಿನ ದಾಳಿಯಿಂದ ಗಾಯಗೊಂಡಿರುವ ಯೋಧರನ್ನು ಸೇನೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಎಸ್ಎಫ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಮತ್ತು ಮೋರ್ಟಾರ್ ಶೆಲ್ ಗಳನ್ನು ಬಳಸಿ ಪಾಕ್ ಸೈನಿಕರು ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದ್ದಾರೆ. ಪಾಕ್ ದಾಳಿಗೆ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ಗುಂಡಿನ ಚಕಮಕಿ ಮುಂದುವರಿಯಿತು ಎಂದು ಅಧಿಕಾರಿ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಪಾಕಿಸ್ತಾನ, ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದೇ ಇರುವುದನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.