ಬೀಜಿಂಗ್ : 'ಚೀನಾ'ಕ್ಕೂ ಭಯೋತ್ಪಾದನೆಯ ಬಿಸಿ ತಟ್ಟಿದ್ದು, ರಂಜಾನ್ ಆಚರಣೆಯನ್ನು ನಿಷೇಧಿಸಿದ್ದ ಚೀನಾ, ಇದೀಗ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ಹಾಗೂ ಮುಸ್ಲಿಮರು ದಾಡಿ ಬೆಳೆಸುವುದನ್ನು ನಿಷೇಧಿಸಿದೆ.
ಚೀನಾದಲ್ಲಿ ಇತ್ತೀಚೆಗೆ ಭಯೋತ್ಪಾದಕರ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಬುರ್ಖಾ ನಿಷೇಧ ಮಾಡಲಾಗಿದೆ. ಬಸ್ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ಚೀನಾ ಕಟ್ಟುನಿಟ್ಟಾಗಿ ವಿರೋಧಿಸಿದೆ. ಈ ಹಿಂದೆ ರಂಜಾನ್ ಆಚರಣೆಗೂ ಚೀನಾ ನಿಷೇಧ ಹೇರಿತ್ತು. ಇದೀಗ ಕುಟುಂಬ ನಿಯಂತ್ರಣ ಯೋಜನೆ(ಫ್ಯಾಮಿಲಿ ಪ್ಲ್ಯಾನಿಂಗ್) ಯ ನಿಯಮಗಳನ್ನು ಮುಸ್ಲಿಮರಿಗೂ ಅನ್ವಯಿಸುವ ಕಾಯ್ದೆ ರಚನೆಗೆ ಚಿಂತನೆ ನಡೆಸಿದೆ.
ಜನಸಂಖ್ಯಾ ನಿಯಂತ್ರಣಕ್ಕಾಗಿ ಕುಟುಂಬಕ್ಕೆ ಒಂದೇ ಮಗು ಎಂಬ ನಿಯಮವನ್ನು ಚೀನಾದಲ್ಲಿದ್ದರೂ ಸಹ ಈ ಕಾನೂನು ಮುಸ್ಲಿಮರಿಗೆ ಅನ್ವಯವಾಗಿರಲಿಲ್ಲ. ಚೀನಾದಲ್ಲಿರುವ ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಲು ಅವಕಾಶ ಇತ್ತು. ಮುಸ್ಲಿಮರಿಗೂ ಕುಟುಂಬ ನಿಯಂತ್ರಣ ಯೋಜನೆ ಅನ್ವಯಿಸಲು ಸಿದ್ಧತೆ ನಡೆಸಲಾಗಿದೆ ಎಂದು ಕಮ್ಯುನಿಸ್ಟ್ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಜುಲೈನಲ್ಲಿ ಚೀನಾದ ಕಷ್ ಗರ್ ಪ್ರದೇಶದಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಪ್ರಾಣಕಳೆದುಕೊಂಡಿದ್ದರು. ಅಲ್ಲದೇ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಿಂದ ಚೀನಾದ ಮುಸ್ಲಿಂ ಪ್ರಾಬಲ್ಯವಿರುವ ಕ್ಸಿನ್ ಜಿಯಾಂಗ್ ಗೆ ಉಗ್ರರು ನುಸುಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ ಖೈದಾದೊಂಗಿಗೆ ಸಂಬಂಧ ಹೊಂದಿರುವ ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದ ಖುಂಜೆರಾಬ್ ಪಾಸ್ ಮೂಲಕ ಚೀನಾದ ಕ್ಸಿನ್ ಜಿಯಾಂಗ್ ಪ್ರದೇಶವನ್ನು ಪ್ರವೇಶಿಸುತ್ತಿದ್ದಾರೆ. ಈ ಮೂಲಕ ಚೀನಾದ ಗಡಿಯಲ್ಲಿ ನೆಲೆ ಸ್ಥಾಪಿಸಿ ಉಗ್ರರು ಭಾರಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯೂ ಚೀನಾಕ್ಕೆ ಲಭ್ಯವಾಗಿದೆ. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳವ ಉದ್ದೇಶದಿಂದ ಚೀನಾದಲ್ಲಿ ಬುರ್ಖಾ ಹಾಗೂ ದಾಡಿ ಬೆಳೆಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಹೇಳಲಾಗಿದೆ.