ಮೈಸೂರು : ದೇಶಾದ್ಯಂತ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಆಯುಧಗಳನ್ನು ಸಿಂಗರಿಸಿ ಭಕ್ತಿಯಿಂದ ಪೂಜೆ ನೆರವೇರಿಸಲಾಗುತ್ತಿದೆ. ಇನ್ನು ನಾಡ ಹಬ್ಬ ದಸರಾ ಪ್ರಮುಖ ಕೇಂದ್ರ ಮೈಸೂರು ಅರಮನೆಯಲ್ಲಿಯೂ ಆಯುಧಪೂಜೆ ಕಳೆಕಟ್ಟಿದೆ.
ಅರಮನೆಯಲ್ಲಿ ಪಂಚಲೋಹದ ಪಲ್ಲಕ್ಕಿಯಲ್ಲಿ ಆಯುಧಗಳನ್ನು ತಂದ ರಾಜಪರಿವಾರ ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿತು. ನಂತರ, ಅರಮನೆ ಒಳಗಿನ ಕಲ್ಯಾಣ ಮಂಟಪದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ನಡೆಸಿದರು. ಬಳಿಕ ಆನೆ ಬಾಗಿಲು ಬಳಿ ಸೇರಿದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ ಸಲ್ಲಿಸಲಾಯಿತು.
ಇನ್ನೊಂದೆಡೆ ಪಂಜಿನ ಕವಾಯಿತು ಮೈಒದಾನದಲ್ಲಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಏರ್ ಶೋ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಕ್ಕಿನ ಹಕ್ಕಿಗಳ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ. ಭಾರತೀಯ ವಾಯುಸೇನೆಯ ಮೂರು ಹೆಲಿಕಾಫ್ಟರ್‌ಗಳಲ್ಲಿ ಪೆಟಲ್ ಡ್ರಾಪಿಂಗ್, ಸ್ಕೈ ಡ್ರೈವಿಂಗ್ ಹಾಗೂ ಸ್ಲೀದರಿಂಗ್ ಪ್ರದರ್ಶನ ಕಣ್ಮನ ಸೆಳೆಯುತ್ತಿದೆ.
ಈ ನಡುವೆ 407ನೇ ದಸರಾ ಮಹೋತ್ಸವ ಹಿನ್ನಲೆಯಲ್ಲಿ ಅರಮನೆಯಲ್ಲಿ ವಿಶ್ವ ವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಅರಂಭವಾಗಿದ್ದು, ಸಕಲ ಸಿದ್ದತೆಗಳೂ ಪೂರ್ಣಗೊಂಡಿವೆ. ಶನಿವಾರ ಮಧ್ಯಾಹ್ನ 2.15ರ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 4.45ರ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಇತರ ಗಣ್ಯರು ದಸರಾ ಗಜಪಡೆ ಸಾರಥಿ ಅರ್ಜುನ ಹೊತ್ತು ತರುವ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ನಂದಿಧ್ವಜ, ನಿಶಾನೆ ಆನೆ ಬಲರಾಮ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ 40 ಸ್ತಬಟಛಿಚಿತ್ರಗಳು ಹಾಗೂ 40 ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.