ಬೆಂಗಳೂರು : ಕಾವೇರಿ ಜಲ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಸಾಧಕ ಬಾಧಕಗಳನ್ನು ಚರ್ಚಿಸಲು ರಾಜ್ಯ ಮಂತ್ರಿ ಪರಿಷತ್ ತುರ್ತು ಸಭೆ ಕರೆಯಲಾಗಿದ್ದು, ಸಭೆಯಲ್ಲಿ ವಿಸೃತವಾಗಿ ಚರ್ಚಿಸಿದ ನಂತರ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾತನಾಡಿದ ಅವರು ಸೆಪ್ಟೆಂಬರ್ 21 ರಿಂದ 27 ರ ವರೆಗೆ ಪ್ರತಿದಿನ ಆರು ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ನ್ಯಾಯಾಲಯವು ಆದೇಶಿಸಿದೆ. ಆದರೆ, ನಿನ್ನೆಯಷ್ಟೇ ಕಾವೇರಿ ಮೇಲುಸ್ತುವಾರಿ ಸಮಿತಿ ಹತ್ತು ದಿನಗಳ ಕಾಲ ಮೂರು ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸಿತ್ತು. ಕಾವೇರಿ ಮೇಲುಸ್ತುವಾರಿ ಸಮಿತಿಯ ಈ ನಿರ್ದೇಶನವನ್ನೇ ಪಾಲಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವಾಗ ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ನ್ಯಾಯಾಲಯವು ಕೇವಲ ನೀರು ಹರಿಸಲು ತಿಳಿಸಿಲ್ಲ. ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಉಭಯ ರಾಜ್ಯಗಳೂ ಈ ಬಗ್ಗೆ ಪ್ರಸ್ತಾಪವನ್ನು ಮಾಡದೇ ಇದ್ದರೂ, ನ್ಯಾಯಾಲಯವು ಈ ಆದೇಶ ಹೊರಡಿಸಿರುವುದು ಆಘಾತ ತಂದಿದೆ. ಈ ಹಿನ್ನಲೆಯಲ್ಲಿ ಮಂತ್ರಿ ಪರಿಷತ್‍ನ ತುರ್ತು ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸಾಧಕ ಬಾಧಕ ಕುರಿತು ಚರ್ಚೆ ನಡೆಸಿ, ತಾಂತ್ರಿಕ ಸಮಿತಿಯ ಸಲಹೆ ಹಾಗೂ ಕಾನೂನು ತಜ್ಞರ ಮಾರ್ಗದರ್ಶನದಂತೆ ರಾಜ್ಯ ಸರ್ಕಾರವು ಮುಂದಿನ ಹೆಜ್ಜೆ ಇಡಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ರಾಜ್ಯದ ಜನತೆಯ ವಿಶೇಷವಾಗಿ ರೈತರ ಹಿತ ರಕ್ಷಿಸುವಲ್ಲಿ ಸರ್ಕಾರ ಬದ್ಧವಾಗಿದೆ. ಶಾಂತಿ ಕಾಪಾಡಲು ಸಹಕರಿಸಿ. ಯಾವುದೇ ಕಾರಣಕ್ಕೂ ಭಾವೋದ್ವೇಗಕ್ಕೆ ಒಳಗಾಗಬೇಡಿ ಎಂದು ರಾಜ್ಯದ ಜನತೆಯಲ್ಲಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.