ರಿಯೋ ಡಿ ಜನೈರೊ : ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ವರದಿ ಮಾಡಲು ತೆರಳಿರುವ ಪತ್ರಕರ್ತರ ಬಸ್ ಮೇಲೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಬಾಸ್ಕೇಟ್ ಬಾಲ್ ಕ್ರೀಡಾಂಗಣದಿಂದ ಒಲಿಂಪಿಕ್ ಪಾರ್ಕ್ ನತ್ತ 12 ಪತ್ರಕರ್ತರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆದಿದ್ದು ದಾಳಿಯಲ್ಲಿ ಮೂವರು ಪತ್ರಕರ್ತರು ಗಾಯಗೊಂಡಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಪ್ರತಿಕೂಲ ಹವಾಮಾನದಿಂದ ದಾಳಿ ಮಾಡಿದವರು ಯಾರು ಎಂಬುದು ಸ್ಪಷ್ಟವಾಗಿ ತಿಳಿಯಲಿಲ್ಲ ಎನ್ನಲಾಗಿದೆ. ದಿಯೋದೊರಾ ಕ್ರೀಡಾಂಗಣದಿಂದ ವರದಿ ನಂತರ ಮುಖ್ಯ ಮಾಧ್ಯಮ ಕೇಂದ್ರಕ್ಕೆ ಮರಳುತ್ತಿದ್ದಾಗ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಿಂದಾಗಿ ಬಸ್ ನ ಎರಡು ಕಿಟಕಿ ಗಾಜುಗಳು ಚೂರಾಗಿವೆ. ಈ ಘಟನೆಯಿಂದಾಗಿ ಒಲಿಂಪಿಕ್ಸ್ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. 85 ಸಾವಿರ ಸೈನಿಕರು ಮತ್ತು ಪೊಲೀಸರು ಭದ್ರತೆಯಲ್ಲಿ ತೊಡಗಿದ್ದಾರೆ.