BW News Bureau : ನಮ್ಮ ಮೆಟ್ರೋ ಒಂದನೇ ಹಂತದ ಪೂರ್ವ-ಪಶ್ಚಿಮ ಕಾರಿಡಾರ್ ನ ಮೊದಲ ಸುರಂಗ ಮಾರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಇದು ದಕ್ಷಿಣ ಭಾರತದ ಮೊದಲ ಮೆಟ್ರೋ ಸುರಂಗ ಮಾರ್ಗವಾಗಿದೆ.
ಪೂರ್ವ-ಪಶ್ಚಿಮ ಕಾರಿಡಾರ್ ನ 4.8 ಕಿ.ಮೀ ಉದ್ದದ ಸುರಂಗ ಮಾರ್ಗಕ್ಕೆ ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ನಿಲ್ದಾಣದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡಿದರು.
ಚಾಲನೆ ನಂತರ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಗಣ್ಯರು ಕಬ್ಬನ್ ಪಾರ್ಕ್ ನಿಂದ ಮೆಜೆಸ್ಟಿಕ್ ನ ಕೆಂಪೇಗೌಡ ಮೆಟ್ರೋ ನಿಲ್ದಾಣದವರೆಗೂ ಪ್ರಯಾಣಿಸಿದರು.
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಹಾಗೂ ಕೆಂಪೇಗೌಡ ಮೆಟ್ರೋ ನಿಲ್ದಾಣಗಳನ್ನು ತಳಿರು ತೋರಣಗಳಿಂದ ಸಿಂಗಾರಗೊಂಡು ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಇನ್ನು ನಿಲ್ದಾಣದ ತುಂಬಾ ಹಸಿರು ಹಾಗೂ ನೇರಳೆ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿತ್ತು.
ಸುರಂಗ ಮಾರ್ಗದ ಉದ್ಘಾಟಣೆ ಸಮಾರಂಭಕ್ಕೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ಸಚಿವರು ಹಾಗೂ ಶಾಸಕರು ಭಾಗವಹಿಸಿದ್ದರು.
ಮೂರನೇ ಹಳಿ ಮೂಲಕ ರೈಲಿಗೆ ವಿದ್ಯುತ್ ಸರಬರಾಜು ಮಾಡಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡುವ ‘ಥರ್ಡ್ ರೈಲ್’ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಸುರಂಗ ಮಾರ್ಗ ಇದಾಗಿದೆ.
ಮೊದಲ ಹಂತದ ಒಟ್ಟಾರೆ 42.30 ಕಿ.ಮೀ. ಮಾರ್ಗದ ಪೈಕಿ 32.49 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದಂತಾಗಲಿದೆ. ಇನ್ನುಳಿದ 9.81 ಕಿ.ಮೀ. ಮಾರ್ಗ ಈ ವರ್ಷಾಂತ್ಯದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ.